ಮೈಸೂರು : ಮುಡಾ ಹಗರಣಕ್ಕೆ ಸಂಬಂಧಸಿದಂತೆ ಅಕ್ರಮ ಸೈಟ್ ಹಂಚಿಕೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಇಂದು ವಿಚಾರಣೆಗೆ ಕರೆದಿದ್ದರು. ಈ ವೇಳೆ ದಿನೇಶ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೌದು ಬೆಂಗಳೂರಿನ ಶಾಂತಿ ನಗರದ ಇಡಿ ಕಚೇರಿಯಲ್ಲಿ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿಚಾರಣೆಗೆ ಹಾಜರಾಗಿದ್ದರು . ಇದೀಗ ಇಡಿ ಅಧಿಕಾರಿಗಳು ದಿನೇಶ್ ಅವರನ್ನು ವಿಚಾರಣೆ ನಡೆಸಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.
ಮುಡಾದ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್ ಮತ್ತು ದಿನೇಶ್ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು. ದಿನೇಶ್ ವಿರುದ್ಧ ಮಾತ್ರ ತನಿಖೆಗೆ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಇ.ಡಿ ಅಧಿಕಾರಿಗಳು ದಿನೇಶ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇದೆಲ್ಲದರ ನಡುವೆ ಲೋಕಾಯುಕ್ತ ಪೊಲೀಸರ ನಡೆಯಿಂದ ಸಮಾಜದಲ್ಲಿ ನಾನು ಅವಮಾನ ಎದುರಿಸುತ್ತಿದ್ದೇನೆ. ಮಾನಸಿಕವಾಗಿ ಕುಗ್ಗಿದ್ದೇನೆ. ಇದರಿಂದ ಬೇಗ ತನಿಖೆಗೆ ಆದೇಶಿಸಿ ಎಂದು ಸ್ನೇಹಮಯಿ ಕೃಷ್ಣ ಅವರು ಕೋರ್ಟ್‍ಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ, ಹೆಚ್.ವಿ ರಾಜೀವ್ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಬೇಕಿಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲರು ವಾದಿಸಿದ್ದಾರೆ. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.29ಕ್ಕೆ ಮುಂದೂಡಿದೆ.