ಚಿಕ್ಕಬಳ್ಳಾಪುರ : ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಆಹಾರ ಇಲಾಖೆಯಲ್ಲಿ ಹೊಸ ತೀರ್ಮಾನ ತೆಗೆದುಕೊಂಡಿದ್ದು, ಅದರಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಹೊಸದಾಗಿ 3500 ಹೊಸ ನ್ಯಾಯಬೆಲೆ ಅಂಗಡಿ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಎಲ್ಲ ಆಹಾರ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಹಂತದಲ್ಲಿ ಪರಿಷ್ಕರಣೆ ಮಾಡಿ ಒಂದೂವರೆ ತಿಂಗಳ ಒಳಗಾಗಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ರಾಜ್ಯದಲ್ಲಿ ಈಗಾಗಲೇ 20,000 ನ್ಯಾಯಬೆಲೆ ಅಂಗಡಿಗಳಿದ್ದು, ಅದರ ಜತೆಗೆ 3,500 ನ್ಯಾಯಬೆಲೆ ಅಂಗಡಿ ಸೇರಿಸಬೇಕು ಎಂದು ಸಿಎಂ ಜತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾವಂತ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಿದರು.