ಕನಕಪುರ: “ಬೆಳೆಸಾಲ, ಹಸು ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ. ಬೆಂಗಳೂರಿಗೆ ವಲಸೆ ಹೋಗಿ ಸೆಕ್ಯುರಿಟಿ ಗಾರ್ಡ್ ಗಳಾಗಿ, ಹೋಟೆಲ್ ಕೆಲಸ ಮಾಡಿಕೊಂಡು ಕಷ್ಟದಲ್ಲಿ ಜೀವನ ತಳ್ಳಬೇಡಿ. ಸ್ವಂತ ಊರಿನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಕರೆ ನೀಡಿದರು.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಕನಕಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕನಕಪುರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳೆಸಾಲ, ಸ್ತ್ರೀ ಶಕ್ತಿ ಸಹಾಯ ಸಂಘದ ಸಾಲ ಮತ್ತು ಸಾಕಾಣಿಕೆ ಸಾಲ ವಿತರಣಾ ಸಮಾರಂಭದಲ್ಲಿ ಡಿ.ಕೆ. ಸುರೇಶ್ ಅವರು ಮಾತನಾಡಿದರು.
“1.10 ಲಕ್ಷ ಜನರಿಗೆ ಬಿಡಿಸಿಸಿ ಬ್ಯಾಂಕ್ ಸಾಲ ನೀಡಿದೆ. ಅದರಲ್ಲಿ ನಮ್ಮ ಕ್ಷೇತ್ರದ ಜನರೇ 15,304 ಜನರಿದ್ದಾರೆ. ಇವರಿಗೆ 300 ಕೋಟಿಯಷ್ಟು ಬೆಳೆ ಹಾಗೂ ಜಾನುವಾರು ಸಾಲ ನೀಡಲಾಗಿದೆ. ಯಾರ ಬಳಿಯೂ ಕೈಯೊಡ್ಡಿ ಬದುಕಬೇಡಿ ಎಂದು ನಾವು ನಿಮಗೆ ಆಸರೆಯಾಗಿ ನಿಲ್ಲುತ್ತಿದ್ದೇವೆ. ಬೆಂಗಳೂರಿನಲ್ಲಿ ಮನೆಗೆಲಸಕ್ಕೆ ಹೋಗುವ ಬದಲು ತಾಯಂದಿರು ಎರಡು ಹಸು ಕಟ್ಟಿಕೊಂಡರೆ ಬದುಕು ಬಂಗಾರವಾಗುತ್ತದೆ. ಕನಕಪುರದಿಂದ ಎರಡುವರೆ ಲಕ್ಷ ಲೀಟರ್ ಹಾಲು ಬರುತ್ತಿದೆ. ಇದನ್ನು 4 ಲಕ್ಷ ಲೀಟರ್ ಗೆ ಏರಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.
“ರೈತರು ಭವಿಷ್ಯದ ಚಿಂತನೆ ಮಾಡುತ್ತಿಲ್ಲ. ಕೇವಲ ನಗರದ ಬದುಕಿನ ಮೊರೆ ಹೋಗುತ್ತಿದ್ದೀರಿ. ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಆದರೆ ಬದುಕಿನ ದಾರಿಯನ್ನು ತೋರಿಸಬಹುದು. ರೇಷ್ಮೆಗೆ ಬೆಲೆ ಇಲ್ಲ ಎಂದರು. ನಾನು ಕಾರ್ಖಾನೆ ಮಾಡಿದ ನಂತರ ಬೆಲೆ ಹೆಚ್ಚಾಗಿದೆ. ಅನೇಕರಿಗೆ ನಾನು ಕಾರ್ಖಾನೆ ಮಾಡಿ ಎಂದು ಹೇಳಿದೆ ಕೇಳಲಿಲ್ಲ. ಕೊನೆಗೆ ನಾನೇ ಅನೇಕ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಸ್ಥಾಪನೆ ಮಾಡಿದೆ. ಇಂದು ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಇದೆ” ಎಂದರು.
“ಕ್ಷೇತ್ರದಲ್ಲಿ ಸುಮಾರು 12 ಸಾವಿರ ಜನರಿಗೆ ಕೃಷಿ ಭೂಮಿ ಹಂಚಿಕೆ ಮಾಡಲಾಗಿದೆ. ನಾನೇ 1 ಸಾವಿರ ಜನರಿಗೆ ಭೂಮಿ ಹಂಚಿಕೆ ಮಾಡಿದ್ದೇನೆ. ಇನ್ನೂ 500- 600 ಜನರಿಗೆ ಭೂಮಿಯನ್ನು ಹಂಚಲು ಬಾಕಿಯಿದೆ. ಅದಕ್ಕೆ ಜಾಗ ಹುಡುಕಲಾಗುತ್ತಿದೆ. 30-40 ಲಕ್ಷ ಮೌಲ್ಯದ ಜಮೀನನ್ನು ಒಂದೇ ಒಂದು ರೂಪಾಯಿ ಪಡೆಯದೇ ಹಂಚಿಕೆ ಮಾಡಲಾಗುತ್ತಿದೆ” ಎಂದರು.
“ಕನಕಪುರ ತಾಲ್ಲೂಕು ಒಂದರಲ್ಲೇ ಸುಮಾರು 77,600 ಕುಟುಂಬದ ಮಹಿಳೆಯರಿಗೆ 2 ಸಾವಿರ ದೊರೆಯುತ್ತಿದೆ. ಈ ರಾಜ್ಯದ ಬಡವರು, ಕೂಲಿ ಕಾರ್ಮಿಕರ ಏಳಿಗೆಗಾಗಿ 50 ರಿಂದ 55 ಸಾವಿರ ಕೋಟಿ ವ್ಯಯ ಮಾಡಲಾಗುತ್ತಿದೆ. ಜನರು ಆರ್ಥಿಕವಾಗಿ ಶಕ್ತಿ ಹೊಂದಬೇಕು ಎಂದು ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
“ಯಾರೂ ಸಹ ಕೇಳದೇ ಇದ್ದರೂ ಶೂನ್ಯ ಬಡ್ಡಿ ದರದಲ್ಲಿ ನಾವೇ ಮನೆ ಬಾಗಿಲಿಗೆ ಬಂದು ಬೆಳೆ, ಜಾನುವಾರ ಸಾಲ ನೀಡುತ್ತಿದ್ದೇವೆ. ಹಾಲಿನ ಖರೀದಿ ದರ ಹೆಚ್ಚಳ ಮಾಡಿ ನಿಮ್ಮ ಪರವಾಗಿ ನಿಂತಿದ್ದೇವೆ. 5 ರೂಪಾಯಿ ಸಬ್ಸಿಡಿ ನೀಡುತ್ತಿದ್ದೇವೆ. ನಿಮ್ಮ ಏಳಿಗೆಯೇ ನಮ್ಮ ಏಳಿಗೆ ಎಂದು ಕೆಲಸ ಮಾಡುತ್ತಿದ್ದೇವೆ” ಎಂದರು.
“ಗ್ಯಾರಂಟಿಯಿಂದ ಅಭಿವೃದ್ಧಿಯಾಗುತ್ತಿಲ್ಲ ಎನ್ನುತ್ತಿದ್ದಾರೆ. ಅಭಿವೃದ್ಧಿ ಅದರ ಪಾಡಿಗೆ ಅದು ಆಗುತ್ತಿದೆ. ನಾವು ಅದನ್ನು ಪ್ರಚಾರ ಮಾಡಿಕೊಳ್ಳುತ್ತಿಲ್ಲ ಅಷ್ಟೇ. ಆರ್ಥಿಕವಾಗಿ ಶಕ್ತಿ ನೀಡಲು ಸಾಲ ನೀಡುತ್ತಿದ್ದೇವೆ. ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ನೀವುಗಳು ಶ್ರಮಿಸಬೇಕು” ಎಂದರು.
“ಸರ್ಕಾರಗಳು ಸಾಲಮನ್ನಾ ಮಾಡುತ್ತವೆ ಎಂದು ಜನರು ಬ್ಯಾಂಕ್ ನಲ್ಲಿ ಬೆಳೆ ಸಾಲ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಸಾಲಮನ್ನಾ ಮಾಡಲು ಸಾಧ್ಯವಾಗುವುದಿಲ್ಲ. ಸಾಲಮನ್ನಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಐದು ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ” ಎಂದು ಹೇಳಿದರು.
“ಎಲ್ಲಾ ಕಡೆ ಸಾಲ ಮಾಡಿ ಕೇವಲ ಬಡ್ಡಿ ಕಟ್ಟುವುದಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡಿ. ಸಾಲವನ್ನು ಪಡೆದು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಿ. ಬಿಡಿಸಿಸಿ ಬ್ಯಾಂಕ್ ಅಲ್ಲಿ ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ 10 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ನೀವು ಉಳಿಯಬೇಕು ಜೊತೆಗೆ ಬ್ಯಾಂಕ್ ಸಹ ಉಳಿಯಬೇಕು” ಎಂದರು.
“ಮಕ್ಕಳಿಗೆ ಆಸ್ತಿ ಮಾಡಲು ಆಗುತ್ತದೋ ಇಲ್ಲವೋ ಎಂದು ಚೆನ್ನಾಗಿ ಓದಿಸುತ್ತಿದ್ದಾರೆ. ಅನೇಕರು ಎಂಜಿನಿಯರಿಂಗ್, ಡಾಕ್ಟರ್ ಗಳಾಗುತ್ತಿದ್ದಾರೆ. ನೀವು ಉನ್ನತ ಶಿಕ್ಷಣ ಪಡೆದ ತಕ್ಷಣ ಕೆಲಸ ಸಿಗುತ್ತದೆ ಎಂದುಕೊಳ್ಳಬೇಡಿ. ಶಿಕ್ಷಣ ಇರುವುದು ನಿಮ್ಮ ಅರಿವನ್ನು, ಜ್ಞಾನವನ್ನು ಹೆಚ್ಚು ಮಾಡಲು. ನೀವು ವಿದ್ಯೆ ಪಡೆಯುವುದು ಉದ್ಯೋಗ ಸೃಷ್ಟಿಸಲು ಹೊರತು ಕೆಲಸ ಮಾಡಲು ಅಲ್ಲ” ಎಂದರು.
“ಬೆಂಗಳೂರು ದಕ್ಷಿಣ ಜಿಲ್ಲೆಯಾದ ತಕ್ಷಣ ಏಕೆ ಜಮೀನುಗಳ ಬೆಲೆ ಹತ್ತಿರತ್ತಿರ ಒಂದು ಕೋಟಿ ತಲುಪಿದೆ. ಏಕೆ ಶ್ರೀಮಂತರು ಕೃಷಿ ಭೂಮಿ ಕೊಂಡುಕೊಳ್ಳುತ್ತಿದ್ದಾರೆ. ಶಿವಕುಮಾರ್ ಅವರು 25 ವರ್ಷಗಳಿಂದ ಜಮೀನು ಮಾರಬೇಡಿ ಎಂದು ಹೇಳುತ್ತಲೇ ಇದ್ದರು ಜನರು ಜಮೀನು ಮಾರುತ್ತಿದ್ದಾರೆ” ಎಂದು ಬೇಸರಿಸಿದರು.
“ಕನಕಪುರ ಕ್ಷೇತ್ರವೆಂದರೆ ಇಡೀ ರಾಜ್ಯದಲ್ಲಿ ಎಲ್ಲರೂ ಹೆಮ್ಮೆ ಪಡುವಂತೆ ರೂಪಿಸಿದ್ದೇವೆ. ಯಾವುದೇ ಒಳ್ಳೆ ಕಾರ್ಯಕ್ರಮವಿದ್ದರು ಮೊದಲು ಇಲ್ಲಿ ಅನುಷ್ಠಾನಗೊಂಡು ಅನಂತರ ಇಡೀ ರಾಜ್ಯಕ್ಕೆ ವಿಸ್ತರಣೆಗೊಳ್ಳುತ್ತದೆ. ನಮಗೆ ಮತ ಹಾಕಿದ ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಮಾಡುವ ಕೆಲಸಗಳಿಗೆ ಪ್ರಚಾರ ಪಡೆಯುವ ಹಪಾಹಪಿತನ ನಮಗಿಲ್ಲ. ಜನರ ಸಂಕಷ್ಟಗಳು ದೂರ ಮಾಡಬೇಕು ಎನ್ನುವುದು ನಮ್ಮ ಉದ್ದೇಶ” ಎಂದು ಹೇಳಿದರು.
“ರಾಜಕೀಯವಾಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ ಎಂದರೂ ಕೇಳದೆ ಬಮುಲ್ ಅಧ್ಯಕ್ಷನನ್ನಾಗಿ ಎಲ್ಲಾ ಮುಖಂಡರು ಸೇರಿ ಆಯ್ಕೆ ಮಾಡಿದ್ದೀರಿ. ನಾನು ಹೇಳು ಸಂಗತಿಗಳನ್ನು ಸಹ ನೀವುಗಳು ಕೇಳಬೇಕಾಗುತ್ತದೆ” ಎಂದು ಹೇಳಿದರು.