ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಬಹುದೊಡ್ಡ ಹಗರಣವೇ ಆಗಿದೆ ಎಂಬುದಾಗಿ ನಿಮ್ಮ ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಿದ್ದಾರೆ.
ನಿನ್ನೆ ನಿಮ್ಮ ಕನ್ನಡ ನ್ಯೂಸ್ ನೌನಲ್ಲಿ ರಾಜ್ಯದಲ್ಲೊಂದು ಬಹುದೊಡ್ಡ ಹಗರಣ: ಇಲ್ಲಿ ಸತ್ತವರು, ಅನಾರೋಗ್ಯ ಪೀಡಿತರ ಹೆಸರಿಗೂ ‘ನರೇಗಾ ಹಣ’ ಜಮಾ ಎಂಬ ತಲೆಬರಹದಲ್ಲಿ ಸುದ್ದಿಯನ್ನು ಪ್ರಕಟಿಸಿತ್ತು. ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿನ ನರೇಗಾ ಯೋಜನೆಯ ಹಗರಣದ ಸುದ್ದಿ ರಾಜ್ಯಾಧ್ಯಂತ ಭಾರೀ ವೈರಲ್ ಕೂಡ ಆಗಿತ್ತು.
ಈ ಸುದ್ದಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಮನಿಸಿದ್ದು, ಈ ಕುರಿತಂತೆ ಸೂಕ್ತ ತನಿಖೆಗೆ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಕಾರ್ಯದರ್ಶಿಗಳು ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ.
ಸಚಿವ ಪ್ರಿಯಾಂಖ್ ಖರ್ಗೆ ಅವರ ಖಡಕ್ ಆದೇಶದಂತೆ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇಲಾಖಾ ಮಟ್ಟದ ತನಿಖಾ ತಂಡದಿಂದ ತನಿಖೆಗೂ ಸೂಚಿಸಿದ್ದಾರೆ. ಹೀಗಾಗಿ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆದಿರುವಂತ ಹಗರಣದ ಬಗ್ಗೆ ಇಂಚಿಂಚೂ ತನಿಖೆಯಾಗಲಿದೆ. ಈ ತನಿಖಾ ವರದಿಯನ್ನು ಇಲಾಖೆಗೆ ಸಲ್ಲಿಸಲಾಗುತ್ತದೆ. ತನಿಖಾಧಿಕಾರಿಗಳು ಸಲ್ಲಿಸಿದಂತ ವರದಿಯ ಅನುಸಾರ ಹಗರಣದಲ್ಲಿ ಭಾಗಿಯಾಗಿರುವಂತ ಕಲ್ಮನೆ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಗ್ಯಾರಂಟಿ ಎಂದೇ ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಶೀಘ್ರವೇ ಮೈಸೂರಲ್ಲಿ ಉದ್ಯೋಗ ಮೇಳ, 120ಕ್ಕೂ ಹೆಚ್ಚು ಕಂಪನಿಗಳು ಭಾಗಿ