ಬೆಂಗಳೂರು : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿನ ಹೊನ್ನೇಶ್ವರ ದೇವಾಲಯದ ಸುತ್ತಲು ಪ್ರಾಣಿಗಳ ವಧೆ ಮತ್ತು ಮಾಂಸಾಹಾರ ಸೇವನೆ ನಿಷೇಧಿಸಿ ಹೊರಡಿಸಿರುವ ನೋಟಿಸ್ ಹಿಂಪಡೆಯಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಅಲ್ಲದೇ, ದೇವಾಲಯದ ಸುತ್ತಮುತ್ತಲ ಭಾಗಗಳಲ್ಲಿ ಪ್ರಾಣಿವಧೆ ಮಾತ್ರ ಸೀಮಿತಗೊಳಿಸಿ ಮುಂದಿನ ಒಂದು ವಾರದಲ್ಲಿ ಹೊಸದಾಗಿ ನೋಟಿಸ್ ನೀಡಲಾಗುವುದು ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ದೇವಾಲಯದ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ಮತ್ತು ಪ್ರಾಣಿ ಬಲಿ ನಡೆಸುವಂತಿಲ್ಲ ಎಂಬ ಷರತ್ತು ವಿಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು 2014ರ ಜುಲೈ 13ರಂದು ಸ್ಥಳೀಯ ಪೊಲೀಸರ ಹೊರಡಿಸಿದ್ದ ನೋಟಿಸ್ ಪ್ರಶ್ನಿಸಿ ಹೊನ್ನೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.