ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತುಗಳ ಸರಬರಾಜುಗಾರರ ವಿರುದ್ಧ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ಕಳೆದ 2 ವಾರದ ಅವಧಿಯಲ್ಲಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ಕೈಗೊಂಡು ಇಬ್ಬರು ವಿದೇಶಿ ಪ್ರಜೆಗಳ ಸಹಿತ 9 ಆರೋಪಿಗಳನ್ನು ಬಂಧಿಸಿದ್ದಾರೆ.
ಕೆ.ಎಸ್.ಲೇಔಟ್, ಅವಲಹಳ್ಳಿ, ಅಮೃತಹಳ್ಳಿ, ಹೆಬ್ಬಗೋಡಿ, ಮೈಕೋಲೇಔಟ್ ಹಾಗೂ ರಾಮಮೂರ್ತಿನಗರ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿಯ ಮಾದಕ ಪದಾರ್ಥ ನಿಗ್ರಹ ದಳದ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಮಾದಕ ಪದಾರ್ಥಗಳ ಸೇವನೆ ಹಾಗೂ ಮಾರಾಟಕ್ಕೆ ಅವಕಾಶ ನೀಡುತ್ತಿರುವುದು ಕಂಡುಬಂದಿದೆ.
ಈ ಕಾರ್ಯಾಚರಣೆಯ ಮೂಲಕ 506 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 50 ಎಲ್‌ಎಸ್‌ಡಿ ಸ್ಟ್ರಿಪ್ಸ್, 85 ಗ್ರಾಂ ಕೊಕೇನ್, 56 ಗ್ರಾಂ ಹೈಡ್ರೋಗಾಂಜಾ ಸೇರಿದಂತೆ 1.5 ಕೋಟಿ ರೂ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ರಗ್ ಪೆಡ್ಲರ್‌ಗಳೊಂದಿಗೆ ಲಾಡ್ಜ್ ಸಿಬ್ಬಂದಿ ಸಂಪರ್ಕ ಹೊಂದಿರುವುದು ತಿಳಿದು ಬಂದಿದ್ದು, ಸದ್ಯ ಲಾಡ್ಜ್ ಸೀಜ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.