ಮಂಗಳೂರು: ಅಪ್ರಾಪ್ತ ಮಕ್ಕಳ ಕೈಗೆ ಸ್ಕೂಟರ್ ನೀಡುವ ಪೋಷಕರೇ ಎಚ್ಚರ, ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ನೀಡಿದ ತಂದೆಗೆ ಕೋರ್ಟ್ ಬರೋಬ್ಬರಿ 27 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಮಂಗಳೂರಿನ ಬಜಪೆ ಪೇಟೆಯಲ್ಲಿ ವಾಹನ ತಪಾಸಣೆ ವೇಳೆ ಟ್ರಿಪಲ್ ರೈಡ್ ಮಾಡಿಕೊಂಡು ಬಂದ ಸ್ಕೂಟರ್ ಸವಾರ ಅಪ್ರಾಪ್ತ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಂದೆಗೆ 27,500 ರು. ದಂಡ ವಿಧಿಸಲಾಗಿದೆ.
ಆ. 25ರಂದು ಬಜಪೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಟ್ರಿಪಲ್ ರೈಡ್‌ನಲ್ಲಿ ಆಗಮಿಸಿದ ಸ್ಕೂಟರ್‌ನ್ನು ನಿಲ್ಲಿಸಿ ದಾಖಲೆ ಪರಿಶೀಲಿಸಿದ್ದರು. ವಿಚಾರಣೆ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರ್ ಚಲಾಯಿಸಲು ಪೋಷಕರು ವಾಹನ ನೀಡಿರುವುದು ದೃಢಪಟ್ಟಿತ್ತು. ಈ ಬಗ್ಗೆ ಬಜಪೆ ಪೊಲೀಸರು ದೋಷಾರೋಪಣ ಪಟ್ಟಿ ತಯಾರಿಸಿ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸ್ಕೂಟರ್ ಮಾಲೀಕನಿಗೆ 27,500 ರು.ದಂಡ ವಿಧಿಸಿ ಆದೇಶಿಸಿದೆ.