ಚಿತ್ರದುರ್ಗ : ಆನ್‌ಲೈನ್ ಬೆಟ್ಟಿಂಗ್ ಹಾಗೂ ಮನಿ ಗೇಮಿಂಗ್ ಹಗರಣ ದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಿನ್ನೆ 3ನೇ ಸಲ ದಾಳಿ ಮಾಡಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರ ಬ್ಯಾಂಕ್‌ಗಳಿಗೆ ಇ.ಡಿ. ಅಧಿಕಾರಿಗಳ ತಂಡ ಶನಿವಾರ ಬೆಳಗ್ಗೆ ಭೇಟಿ, ಪಪ್ಪಿ ಅವರಿಗೆ ಸೇರಿದ ಲಾಕರ್ ನಲ್ಲಿದ್ದವು ಎನ್ನಲಾದ ಅಮೂಲ್ಯ ವಸ್ತುಗಳಿದ್ದ 2 ಬಟ್ಟೆ ಚೀಲಗಳನ್ನು ತೆಗೆದು ಕೊಂಡು ಹೋಗಿದೆ. ಇದರಲ್ಲಿ ಚಿನ್ನ ಇತ್ತೋ ಅಥವಾ ದಾಖಲೆಗಳಿದ್ದವೋ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಆದಾಗ್ಯೂ ಲಾಕರ್‌ಗಳಲ್ಲಿ ಚಿನ್ನ ಸಿಕ್ಕಿರುವುದನ್ನು ಬಲ್ಲ ಮೂಲಗಳು ಖಚಿತಪಡಿಸಿವೆ.
ಎಲ್ಲಾ ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಪಪ್ಪಿಗೆ ಸೇರಿದ ಅಪಾರವಾದ ಚಿನ್ನಾಭರಣ ಚೀಲಗಳು ಪತ್ತೆಯಾಗಿವೆ ಎನ್ನಲಾಗಿದೆ. ಒಟ್ಟು 4 ಬ್ಯಾಂಕ್‌ಗಳಿಂದ ಇ.ಡಿ. ಅಧಿಕಾರಿಗಳು ಲಾಕರ್‌ನಲ್ಲಿ ದೊರೆತ ಚಿನ್ನದ ಆಭರಣಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಎಷ್ಟು ಪ್ರಮಾಣ ಅದರ ಮೌಲ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯ ಎರಡುಬಾರಿ ಇ.ಡಿ. ವಶಕ್ಕೆ ನೀಡಿದೆ.ಸೆ.8ರಂದು ಮತ್ತೆ ಪಪ್ಪಿಯನ್ನು ನ್ಯಾಯಾಲಯಕ್ಕೆ ಕೋರ್ಟಿಗೆ ಹಾಜರು ಪಡಿಸಬೇಕಾಗಿದೆ. ಇದಕ್ಕೂ ಮುನ್ನ ಮಂಗಳವಾರ ಸೆ.2ರಂದು ಪಪ್ಪಿಗೆ ಸೇರಿದ ಒಟ್ಟು 6 ಕಾರುಗಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಇ.ಡಿ. ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು.