ದಾವಣಗೆರೆ : ಕಳೆದ ಕೆಲವು ತಿಂಗಳ ಹಿಂದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಸರಣಿ ಆತ್ಮಹತ್ಯೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಕೂಡ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಡೆಗೆ ಹೊಸ ಕಾನೂನು ಜಾರಿ ಮಾಡಿತ್ತು. ಆದರೂ ಸಹ ಇಂದಿನವರೆಗೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಪ್ಪಿಲ್ಲ. ಇದೀಗ ದಾವಣಗೆರೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಖಾಸಗಿ ಬ್ಯಾಂಕ್, ಮೈಕ್ರೋ ಫೈನಾನ್ಸ್‌ನಿಂದ ಪಡೆದಿದ್ದ ಸಾಲದ 2 ತಿಂಗಳ ಕಂತು ಕಟ್ಟಲಿಲ್ಲವೆಂಬ ಕಾರಣಕ್ಕೆ ಬ್ಯಾಂಕ್, ಫೈನಾನ್ಸ್ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡಿದ್ದರಿಂದ ನೊಂದ ವ್ಯಕ್ತಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿರಮಗೊಂಡನಹಳ್ಳಿಯ ಚಿತ್ರಲಿಂಗ (31) ಎಂದು ತಿಳಿದುಬಂದಿದೆ. ಈತ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಮಾಡಿಕೊಂಡಿದ್ದು, 2 ತಿಂಗಳ ಸಾಲದ ಕಂತು ಕಟ್ಟುವಂತೆ ಸಾಲ ವಸೂಲಾತಿ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿದ್ದರು. ಇದರಿಂದ ಮಾನಸಿಕವಾಗಿ ನೊಂದ ಚಿತ್ರಲಿಂಗ ಡೆತ್ ನೋಟ್ ಬರೆದಿಟ್ಟಿದ್ದು, ಖಾಸಗಿ ಬ್ಯಾಂಕ್, ಫೈನಾನ್ಸ್ ಗಳ ಹೆಸರು ಹಾಗೂ ಅದರ ಸಿಬ್ಬಂದಿ ಮೊಬೈಲ್ ನಂಬರ್‌ಗಳನ್ನೂ ಉಲ್ಲೇಖಿಸಿದ್ದಾರೆ.
ಅಲ್ಲದೇ, ತನ್ನ ಪತ್ನಿ ಹೆಸರಿನಲ್ಲಿ ಸಾಲ ಮಾಡಿದ್ದಕ್ಕೆ ತನ್ನನ್ನು ಕ್ಷಮಿಸುವಂತೆ ಚಿತ್ರಲಿಂಗ ಕೋರಿದ್ದು, ಮನೆಯಲ್ಲಿ ಅಡುಗೆ ಮಾಡಿದ್ದೀನಿ ಊಟ ಮಾಡು ಎಂಬುದಾಗಿ ಡೆತ್‌ನೋಟ್‌ನಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಚಿತ್ರಲಿಂಗ ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕುಟುಂಬದವರು ಒತ್ತಾಯಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ, ಮಗನ ಜೊತೆಗೆ ಶಿರಮಗೊಂಡನಹಳ್ಳಿಯಲ್ಲಿ ಚಿತ್ರಲಿಂಗ ವಾಸಿಸುತ್ತಿದ್ದರು.








