ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತು ಮಹಿಳಾ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ನೀಡಿದ ಉತ್ತರ ವಿವಾದಕ್ಕೀಡಾಗಿದೆ. ಹೌದು ಪತ್ರಕರ್ತೆಯೊಬ್ಬರು ಮಹಿಳೆಯರಿಗೆ ಇಲ್ಲಿ ಹೆರಿಗೆ ಸರಿಯಾದ ಸೌಲಭ್ಯ ಇಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾವಾಗ ಸಿಗುತ್ತದೆ ಎಂದು ಪ್ರಶ್ನಿಸಿದಾಗ ನಿನಗೆ ಹೆರಿಗೆ ಆಗಬೇಕೇ? ಹೇಳು, ನಾನು ಮಾಡಿಸಿ ಕೊಡುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಇತ್ತೀಚೆಗೆ ಸೂಪಾ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಆರ್.ವಿ.ದೇಶಪಾಂಡೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಖಾಸಗಿ ವಾಹಿನಿಯ ಹಿರಿಯ ಪತ್ರಕರ್ತೆಯೊಬ್ಬರು, ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಇಲ್ಲಿನ ಜನರು ತುರ್ತು ಸಂದರ್ಭದಲ್ಲಿ ಹೊರ ಜಿಲ್ಲೆಯ ಆಸ್ಪತ್ರೆಗಳನ್ನು ಅವಲಂಬಿಸಬೇಕು. ನಿಮ್ಮ ಹಳಿಯಾಳ ಕ್ಷೇತ್ರದಲ್ಲಿ ಹೆರಿಗೆ ಆಗಬೇಕೆಂದರೂ ಸಮಸ್ಯೆ ಇದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ನಿಂದೇನಾದ್ರೂ ಹೆರಿಗೆ ಮಾಡಿಸಬೇಕಾ ಹೇಳು.. ಮಾಡಿಸ್ತೀನಿ’ ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಶಾಸಕರ ಈ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುವ ಪ್ರವೃತ್ತಿ ಮುಂದುವರೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಕುರಿತು ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಇದೀಗ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದೆ. ಅಷ್ಟೇ ಅಲ್ಲದೇ, ಈ ಹೇಳಿಕೆ ಕೇವಲ ಅವಮಾನವಲ್ಲ. ಬದಲಾಗಿ, ಸ್ತ್ರೀದ್ವೇಷದ ಸಂಸ್ಕೃತಿ ಎಂದು ಟೀಕಿಸಿದೆ.