ಬೆಂಗಳೂರು: ಬೆಂಗಳೂರು: ಆಸ್ತಿಗಳ ನೋಂದಣಿ ಶುಲ್ಕವನ್ನು ಹೆಚ್ಚಳ ಮಾಡಿ ಕಂದಾಯ ಇಲಾಖೆ ಆದೇಶವನ್ನು ಹೊರಡಿಸಿದೆ. ಇಂದು ಇಂದಿನಿಂದ ಅನ್ವಯವಾಗಲಿದೆ.
ಈ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಮುದ್ರಾಂಕ, ನೋಂದಣಿ ಹಾಗೂ ಇತರೆ ಸೆಸ್ ಸೇರಿದಂತೆ ಕರ್ನಾಟಕ ರಾಜ್ಯವು ಶೇ.6.6ರಷ್ಟು ವಿಧಿಸುತ್ತಿತ್ತು. ನೋಂದಣಿ ಶುಲ್ಕವನ್ನು ಶೇ.1ರಿಂದ ಶೇ.2ರಷ್ಟು ಪರಿಷ್ಕರಿಸಿದೆ. ನಾಳೆಯಿಂದ ಜಾರಿಗೆ ಬರುವಂತೆ ಶೇ.1ರಿಂದ ಶೇ.2ರಷ್ಟು ಪರಿಷ್ಕರಿಸಿದೆ.
ಕರ್ನಾಟಕದಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು ಆಸ್ತಿ ವಹಿವಾಟಿನ ಅವಿಭಾಜ್ಯ ಅಂಗಗಳಾಗಿವೆ. ಕರ್ನಾಟಕದಲ್ಲಿ ಆಸ್ತಿಯನ್ನು ಮಾರಾಟ ಮಾಡಿದಾಗಲೆಲ್ಲಾ, ಖರೀದಿದಾರರು ಕರ್ನಾಟಕದಲ್ಲಿ ಅನ್ವಯವಾಗುವ ಸ್ಟ್ಯಾಂಪ್ ಡ್ಯೂಟಿಯನ್ನು ಕಟ್ಟಬೇಕಾಗಿದೆ.
ಕರ್ನಾಟಕದಲ್ಲಿ ಸ್ಟ್ಯಾಂಪ್ ಡ್ಯೂಟಿ ಪಾವತಿಯಿಂದ ಸಂಗ್ರಹಿಸಲಾದ ಶುಲ್ಕವು ರಾಜ್ಯ ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲವಾಗಿದೆ. ಆಸ್ತಿ ಖರೀದಿಯ ಸಂದರ್ಭದಲ್ಲಿ, ದಾಖಲೆಗಳನ್ನು ನೋಂದಾಯಿಸಲು ಸ್ಟ್ಯಾಂಪ್ ಡ್ಯೂಟಿಯನ್ನು ಖರೀದಿದಾರರು ಪಾವತಿಸುತ್ತಾರೆ.
ಅಂದ ಹಾಗೇ ರಾಜ್ಯ ಸರ್ಕಾರವು ಆಗಸ್ಟ್ 31 ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆಯಿದ್ದು, ಅದನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ಪರಿಷ್ಕರಿಸಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತರಾದ ಮಲ್ಲೈ ಮುಗಿಲನ್ ತಿಳಿಸಿದ್ದಾರೆ.
ಮುದ್ರಾಂಕ ,ನೋಂದಣಿ ಹಾಗೂ ಇತರೆ ಸೆಸ್ ಸೇರಿ ಕರ್ನಾಟಕ ರಾಜ್ಯವು ಶೇ.6.6 ರಷ್ಟು ಶುಲ್ಕ ವಿಧಿಸುತ್ತಿತ್ತು. ಈ ಅವಧಿಯಲ್ಲಿ ತಮಿಳುನಾಡಿನಲ್ಲಿ ಶೇ.9, ಕೇರಳ ಶೇ.10, ಆಂಧ್ರಪ್ರದೇಶ ಶೇ. 7.5, ತೆಲಂಗಾಣ ಶೇ.7.5 ರಷ್ಟು ಶುಲ್ಕ ಆಕರಿಸುತ್ತಿವೆ. ರಾಜ್ಯ ಸರ್ಕಾರವು ಆಗಸ್ಟ್ 31, 2025 ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇಕಡ 1 ರಿಂದ ಶೇ.2 ರಷ್ಟು ಪರಿಷ್ಕರಿಸಿದೆ.
ಪರಿಷ್ಕೃತ ನೋಂದಣಿ ಶುಲ್ಕವನ್ನು ಸುಗಮವಾಗಿ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಲು ಹಿಂದಿನ ನೋಂದಣಿ ಶುಲ್ಕವನ್ನು ಪಾವತಿಸಿ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದಿರುವವರು ಅಥವಾ ಶುಲ್ಕವನ್ನು ಪಾವತಿಸಿ ಅಪಾಯಿಂಟ್‌ಮೆಂಟ್ ಪಡೆಯದಿರುವವರು, ವ್ಯತ್ಯಾಸದ ಮೊತ್ತವನ್ನು ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಬೇಕು. ಮೊದಲು ಬಳಸಿದ ಲಾಗಿನ್ ಮೂಲಕವೇ ಈ ಪಾವತಿಯನ್ನು ಮಾಡಬೇಕು. ಅರ್ಜಿದಾರರಿಗೆ ನೆರವಾಗುವ ದೃಷ್ಟಿಯಿಂದ ಅಗತ್ಯ ಸೂಚನೆಗಳನ್ನು ಒಳಗೊಂಡ ಎಸ್‌ಎಂಎಸ್ ನೇರವಾಗಿ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.
ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಸಲ್ಲಿಸಲಾಗಿರುವ ಹಾಗೂ ಪರಿಶೀಲನೆಯಲ್ಲಿರುವ ದಸ್ತಾವೇಜುಗಳಿಗೆ ನೋಂದಣಿ ಶುಲ್ಕವನ್ನು ಮರು ಲೆಕ್ಕ ಹಾಕಲಾಗುವುದು ಮತ್ತು ಪರಿಷ್ಕೃತ ಶೇಕಡ 2ರಂತೆ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ವರ್ಗದ ಅರ್ಜಿದಾರರಿಗೆ ಪಾವತಿಯ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಪರಿಷ್ಕೃತ ನೋಂದಣಿ ಶುಲ್ಕದ ವಿವರವನ್ನು ತಿಳಿಸಲಾಗುವುದು.
ಇಲಾಖೆಯು ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಎಲ್ಲಾ ಅರ್ಜಿದಾರರಿಗೆ ಮೇಲ್ಕಾಣಿಸಿದ ನವೀಕರಿಸಿದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಂತ ಹಂತವಾಗಿ ಅನುಸರಿಸಬಹುದಾದ ವಿವರವಾದ ಸೂಚನೆಗಳನ್ನು ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಕಲ್ಪಿಸಲಾಗುವುದು ಅಂತ ತಿಳಿಸಿದ್ದಾರೆ.

.








