ಶಿವಮೊಗ್ಗ : ಶಂಕರಯ್ಯ, ಶಿವಮೊಗ್ಗ ಇವರು ವ್ಯವಸ್ಥಾಪಕರು, ಓಲಾ ಸರ್ವೀಸ್ ಸೆಂಟರ್ ಶಿವಮೊಗ್ಗ, ಎಂ.ಡಿ ಓಲಾ ಎಲೆಕ್ಟ್ರಿಕಲ್ ಟೆಕ್ನಾಲಾಜಿ ಪ್ರೈ.ಲಿ ಬೆಂಗಳೂರು ಹಾಗೂ ವ್ಯವಸ್ಥಾಪಕರು ಓಲಾ ಎಲೆಕ್ಟ್ರಿಕಲ್ ಟೆಕ್ನಾಲಾಜಿ ಪ್ರೈವೆಟ್ ಲಿ. ಬೆಂಗಳೂರು ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಎದುರುದಾರರಿಗೆ ಆದೇಶಿಸಿದೆ.
ದೂರುದಾರರು ಆನ್‌ಲೈನ್ ಮೂಲಕ ರೂ.1,51,071 ಪಾವತಿಸಿ ದಿ:26/5/2022 ರಂದು ಒಂದು ಓಲಾ ಎಲೆಕ್ಟ್ರಿಕಲ್ ಸ್ಕೂಟರನ್ನು ಬುಕ್ ಮಾಡಿದ್ದು, ದಿ:10/6/2022 ರಂದು ಪಡೆದುಕೊಂಡಿರುತ್ತಾರೆ. ಈ ಸ್ಕೂಟರ್ 8 ವರ್ಷಗಳ ಬ್ಯಾಟರಿ ವಾರಂಟಿ ಮತ್ತು ಇತರೇ ಭಾಗಗಳಿಗೆ ಮೂರು ವರ್ಷಗಳ ವಾರೆಂಟಿ ಹೊಂದಿರುತ್ತದೆ. ಸ್ಕೂಟರ್‌ನ್ನು ವಶಕ್ಕೆ ಪಡೆದ ನಂತರ ದಿ:10/07/2022 ರಂದು ಗಾಡಿ ಸ್ಟಾರ್ಟ್ ಆಗದಿರುವುದರಿಂದ ದಿ:12/7/2022 ರಂದು ರಿಪೇರಿಗಾಗಿ ಬಿಟ್ಟಿದ್ದು ಸಂಸ್ಥೆಯವರು ರಿಪೇರಿ ಮಾಡಿ ನೀಡಿರುತ್ತಾರೆ. ತದನಂತರ ದಿ:9/1/2025 ರಂದು ಪುನಃ ಸ್ಟಾರ್ಟ್ ಆಗದಿರುವುದರಿಂದ 1 ನೇ ಎದುರುದಾರರಿಗೆ ಈ ಬಗ್ಗೆ ತಿಳಿಸಿದ್ದು ಎದುರುದಾರರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ದಿ:18/1/2025 ರಂದು 1 ನೇ ಎದುರುದಾರರ ಬಳಿ ರಿಪೇರಿಗಾಗಿ ಬಿಟ್ಟು ಆನ್‌ಲೈನ್‌ನಲ್ಲಿ ದೂರನ್ನು ದಾಖಲಿಸಿದಾಗ, ದಿ:3/3/2025 ರಂದು ರಿಪೇರಿಗಾಗಿ ರೂ.90,000 ಗಳನ್ನು ಪಾವತಿಸಿದಲ್ಲಿ ರಿಪೇರಿ ಮಾಡುವುದಾಗಿ ತಿಳಿಸಿರುತ್ತಾರೆ.
ಓಲಾ ಸ್ಕೂಟರ್ ಇನ್ನೂ ವಾರಂಟಿ ಅವಧಿಯಲ್ಲಿದ್ದರೂ ರಿಪೇರಿ ಮಾಡದೇ, ಸ್ಕೂಟರ್‌ನ್ನು ತಮ್ಮ ಅಧೀನದಲ್ಲಿಯೇ ಇಟ್ಟುಕೊಂಡಿದ್ದು ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡು ಮೇಲ್ಕಂಡ ದೂರಿಗೆ ಆಕ್ಷೇಪಣೆಯನ್ನು ಸಲ್ಲಿಸಲು 1 ರಿಂದ 3 ರ ವರೆಗಿನ ಎದುರುದಾರರಿಗೆ ನೋಟಿಸ್ ನೀಡಿದ್ದು, ನೋಟಿಸ್ ಜಾರಿಯಾಗಿದ್ದರೂ ಎಲ್ಲಾ ಎದುರುದಾರರು ಗೈರು ಹಾಜರಾಗಿದ್ದರಿಂದ 1 ರಿಂದ 3 ನೇ ಎದುರುದಾರರನ್ನು ಏಕಪಕ್ಷೀಯ ಎಂದು ಪರಿಗಣಿಸಲಾಗಿದೆ.
ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲಾತಿಗಳನ್ನು ಪರಿಶೀಲಿಸಿ ವಾದವನ್ನು ಆಲಿಸಿ ಎದುರುದಾರರು ಓಲಾ ಸ್ಕೂಟರ್ ವಾರಂಟಿ ಅವಧಿಯಲ್ಲಿದ್ದರೂ ಸಹ ರಿಪೇರಿ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, 1 ರಿಂದ 3 ನೇ ಎದುರುದಾರರು ದೂರುದಾರರಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ರೂ.67,348 ಗಳಿಗೆ ದಿ:18/1/2025 ರಿಂದ ವಾರ್ಷಿಕ ಶೇ.10 ರ ಬಡ್ಡಿಯನ್ನು ಸೇರಿಸಿ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಮತ್ತು 1 ರಿಂದ 3 ನೇ ಎದುರುದಾರರು ರೂ.40,000 ಗಳನ್ನು ಮಾನಸಿಕ ವೇದನೆಗಾಗಿ ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರಂತೆ ಬಡ್ಡಿಯನ್ನು ಸೇರುಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಈ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠ ದಿ:19/8/2025 ರಂದು ಆದೇಶಿಸಿದೆ.
‘ಅಪ್ಪು’ ನಮ್ಮನ್ನು ಸೇರಿಸಿದ್ರು; ವಿವಾಹದ ಬಳಿಕ ಆಂಕರ್ ಅನುಶ್ರೀ ಮೊದಲ ರಿಯಾಕ್ಷನ್