ರಾಯಚೂರು : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಬಾಣಂತಿ, ಮಗು ಸಾವನ್ನಪ್ಪಿದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅರಕೇರಾ ತಾಲೂಕಿನ ಭೋಗಿ ರಾಮನಗುಂಡ ಗ್ರಾಮದ ಶಿವಮ್ಮ(29) ಮತ್ತು ಅವರ ಶಿಶು ಮೃತಪಟ್ಟಿದೆ.
ಗರ್ಭಿಣಿ ಶಿವಮ್ಮ ಪ್ರತಿ ತಿಂಗಳು ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಹೆರಿಗೆ ನೋವು ಹೆಚ್ಚಾಗಿದ್ದರಿಂದ ಸ್ಟಾಪ್ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿದ್ದು, ವೈದ್ಯರಿಗೆ ಮಾಹಿತಿ ನೀಡಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಶಿವಮ್ಮ ಅವರನ್ನು ಕಳುಹಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯದಲ್ಲಿ ತಾಯಿ, ಮಗು ಮೃತಪಟ್ಟಿದ್ದಾರೆ.ದೇವದುರ್ಗ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣವೆಂದು ಮೃತರ ಸಹೋದರ ಆರೋಪಿಸಿದ್ದಾರೆ.
ಚಿಕಿತ್ಸೆಗೆ ಸ್ಪಂದಿಸದೆ ಶಿವಮ್ಮ ಮೃತಪಟ್ಟಿದ್ದಾರೆ. ನಾನು ಆಸ್ಪತ್ರೆಯಲ್ಲಿ ಇರಲಿಲ್ಲ. ಆಂತರಿಕ ತನಿಖೆ ನಡೆಸಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗೆ ವರದಿ ನೀಡಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಬನದೇಶ್ವರ ತಿಳಿಸಿದ್ದಾರೆ.