ರಾಮನಗರ : ಕಳೆದ ಕೆಲವು ತಿಂಗಳ ಹಿಂದೆ ಮಂಡ್ಯ ಮೈಸೂರು ಭಾಗದಲ್ಲಿ ಸಾವಿರಾರು ಹೆಣ್ಣು ‘ಭ್ರೂಣ ಹತ್ಯೆ’ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ರಾಮನಗರ ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಅನ್ನು ಸೀಜ್ ಮಾಡಲಾಗಿದೆ.
ಹೌದು ಬೆಂಗಳೂರು ತಾತಗುಣಿ ಮೂಲದ ಪೋಷಕರಿಗೆ ಎರಡು ಹೆಣ್ಣು ಮಕ್ಕಳಿದ್ದು, ಮೂರನೇಯದು ಹೆಣ್ಣಾಗುತ್ತಿದೆ. ಆ ಮಗು ನಮಗೆ ಬೇಡ ಎಂದು ಪೋಷಕರು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಬೆನ್ನಲ್ಲೆ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಉಪನಿರ್ದೇಶಕ ಡಾ.ವಿವೇಕ್ ದೊರೈ ಅವರು ಸ್ಕ್ಯಾನಿಂಗ್ ಕೇಂದ್ರವನ್ನು ಸೋಮವಾರ ಸಂಜೆ ಸೀಜ್ ಮಾಡಿದ್ದಾರೆ. ಈ ಘಟನೆಯಿಂದಾಗಿ ಭ್ರೂಣ ಪತ್ತೆ ಹಾಗೂ ಹತ್ಯೆ ಜಾಲ ರಾಮನಗರದಲ್ಲಿಯೂ ಸಕ್ರಿಯವಾಗಿರುವ ಅನುಮಾನಗಳು ದಟ್ಟವಾಗಿದೆ.