ಮಂಡ್ಯ : ಇತ್ತೀಚಿಗೆ ರಾಜ್ಯದಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಹೃದಯಾಘಾತಕ್ಕೆ ಮತ್ತೋರ್ವ ಬಾಲಕ ಸಾವನ್ನಪ್ಪಿದ್ದಾನೆ. ಹೌದು ಹಬ್ಬದ ಸಂಭ್ರಮದಲ್ಲಿದ್ದ 17 ವರ್ಷದ ಬಾಲಕನಿಗೆ ಹೃದಯಾಘಾತವಾಗಿ ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲಿಗೇರೆ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿ ಚಿರಾಗ್, ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ, ಹಬ್ಬದ ಸಿದ್ಧತೆಗಾಗಿ ಚಿರಾಗ್ ತನ್ನ ತಂದೆ-ತಾಯಿಯೊಂದಿಗೆ ಬಟ್ಟೆ ಖರೀದಿಗೆ ತೆರಳಿದ್ದ. ಈ ವೇಳೆ ಏಕಾಏಕಿ ಅವನಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾನೆ. ಕೂಡಲೇ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಚಿರಾಗ್ ಕೊನೆಯುಸಿರೆಳೆದಿದ್ದಾನೆ.
ಈ ಘಟನೆ ಕುಟುಂಬದವರಿಗೆ ಮತ್ತು ಗ್ರಾಮಸ್ಥರಿಗೆ ಆಘಾತವನ್ನುಂಟುಮಾಡಿದೆ. ಚಿರಾಗ್‌ನ ಆಕಸ್ಮಿಕ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಸಾವಿಗೆ ಹೃದಯಾಘಾತವೇ ಕಾರಣ ಎಂದು ದೃಢಪಟ್ಟಿದೆ. ಯುವ ವಯಸ್ಸಿನಲ್ಲೇ ಇಂತಹ ದುರಂತ ಸಂಭವಿಸಿದ್ದು, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವ ಅಗತ್ಯವನ್ನು ಎತ್ತಿ ತೋರಿಸಿದೆ.