2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 291340 ಹೆ. ಕ್ಷೇತ್ರದಲ್ಲಿ ಬಿತ್ತನೆಯಾಗಿರುತ್ತದೆ. ಜಿಲ್ಲೆಯಾದ್ಯಂತ ಪೀಡೆ ಸರ್ವೇಕ್ಷಣಾ ಸಮೀಕ್ಷೆ ಕೈಗೊಂಡಿದ್ದು, ಮುಂಗಾರು ಮುಖ್ಯ ಬೆಳೆಗಳಾದ ಹೆಸರು, ಗೋವಿನಜೋಳ, ಶೇಂಗಾ, ಸೋಯಾಬಿನ್ ಇತ್ಯಾದಿಗಳಲ್ಲಿ ಕೀಟ ಅಥವಾ ರೋಗ ಬಾಧೆ ಕಂಡುಬಂದಿದ್ದು, ಈ ಬೆಳೆಗಳ ಸಂರಕ್ಷಣೆ ಅಗತ್ಯವಿರುವುದರಿಂದ ರೈತ ಬಾಂಧವರು ಬೆಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.
ಸೋಯಾ ಮತ್ತು ಅವರೆ
ಸೋಯಾ ಅವರೆ ಬೆಳೆಯು 60 ರಿಂದ 70 ದಿವಸದ ಬೆಳೆಯಿದ್ದು ಸ್ಪೊಡಾಪ್ಟರಾ ಮತ್ತು ಹೆಲಿಕೋವರ್ಪಾ ಕೀಟಗಳ ಬಾಧೆಯು ಹೆಚ್ಚಾಗಿದ್ದು, ಎಲೆಗಳನ್ನು ತಿಂದು ಹಾನಿ ಮಾಡುವುದಲ್ಲದೆ ಎಳೆ ಕಾಯಿಗಳನ್ನು ಹಾನಿ ಮಾಡುತ್ತಿದೆ. ಕಾರಣ ಕೂಡಲೇ ನಿರ್ವಹನಾ ಕ್ರಮಗಳನ್ನು ಅನುಸರಿಸಬೇಕು.
ನಿರ್ವಹಣೆ – ಎಲೆ ತಿನ್ನುವ ಕೀಡೆಗಳ ಹತೋಟಿಗೆ ಕ್ವಿನಾಲ್ಫಾಸ್ 25 ಇಸಿ ಅಥವಾ 0.5 ಮಿ.ಲೀ. ಲ್ಯಾಂಬ್ಡಾಸೈಲೋಥ್ರಿನ್ 5 ಇ.ಸಿ ಅಥವಾ 0.3 ಗ್ರಾಂ ಇಮಾಮೆಕ್ಟಿನ್ ಬೆಂಝೊಯೆಟ್ 5 ಎಸ್.ಜಿ ಅಥವಾ 0.5 ಮಿ.ಲೀ. ಫ್ಲೂಬೇಂಡಿಮೈಡ್ 20% ಡಬ್ಲೂಜಿ ಅಥವಾ ಕ್ಲೋರಾಂಥೋನೀಲಿಪೆÇ್ರೀಲ್ 18.5% sಛಿ, 0.4 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮೊಡ ಕವಿದ ವಾತಾವರಣ ಆವರಿಸಿಕೊಂಡು, ತುಂತುರು ಮಳೆ ಹನಿಯಿಂದ ಸಿಂಪರಣೆ ಮಾಡಲು ಅವಕಾಶವಿಲ್ಲದಿದ್ದಾಗ, ಒಂದೆರಡು ಪಂಪು ಜೈವಿಕ ಕೀಟನಾಶಕಗಳಾದ 1.0 ಮಿ.ಲೀ. ಬಿ.ಟಿ ದುಂಡಾಣು ಅಥವಾ 2.0 ಗ್ರಾಂ ಮೆಟರೈಜಿಯಂ ರಿಲೈ ಶಿಲೀಂಧ್ರವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಗಾಳಿಯ ಮುಖಾಂತರ ಜೈವಿಕ ಪೀಡೆನಾಶಕಗಳು ಹೊಲದ ಎಲ್ಲ ಕಡೆ ಪಸರಿಸಿ ಪೀಡೆ ನಿರ್ವಹಣೆಗೆ ಸಹಕಾರಿಯಾಗುವುದು.
ತುಕ್ಕು ರೋಗ
ಜಿಲ್ಲೆಯ ಹಲವೆಡೆ ತುಕ್ಕು ರೋಗದ ಬಾಧೆ ಕಾಣಿಸಿಕೊಂಡಿದ್ದು ಮುಂದೆ ಎಲ್ಲ ಕಡೆಗಳಲ್ಲಿ ಹರಡುವ ಸಂಭವವಿರುವುದರಿಂದ ಕೂಡಲೇ ನಿರ್ವಹಣಾ ಕ್ರಮ ಕೈಗೊಳ್ಳಬೇಕು.
ಲಕ್ಷಣಗಳು: ಪ್ರಾರಂಭದಲ್ಲಿ ಎಲೆ ಕೆಳಭಾಗದಲ್ಲಿ ಕಂದು ಬಣ್ಣದ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುವುದು ನಂತರ ಕೆಂಪು ಬಣ್ಣಕ್ಕೆ ತಿರಗುತ್ತವೆ. ಕ್ರಮೇಣ ಗಿಡದ ಮೇಲ್ಭಾಗದ ಎಲೆಗಳಿಗೂ ಹರಡಿ ಎಲ್ಲಾ ಎಲೆಗಳೂ ಹಳದಿ ವರ್ಣಕ್ಕೆ ತಿರುಗಿ ನಂತರ ಉದುರಿ ಬೀಳುತ್ತವೆ.
ನಿರ್ವಹಣೆ: ರೋಗ ಕಂಡ ತಕ್ಷಣ 1.0 ಮಿ.ಲೀ. ಹೆಕ್ಸಾಕೊನಾಜೋಲ್ 5 ಇ.ಸಿ. ಅಥವಾ 1.0 ಮಿ. ಲೀ. ಪ್ರೊಪಿಕೊನಾಜೋಲ್ 25 ಇ. ಸಿ. ಅಥವಾ 10 ಮಿ. ಲೀ. ಬೇವಿನ ಎಣ್ಣೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಶೇಂಗಾ
ಈಗಾಗಲೇ ಜಿಲ್ಲೆಯಾದ್ಯಂತ ಬೆಳೆಯು 60 ರಿಂದ 70 ದಿವಸದ ಬೆಳೆಯಿದ್ದು, ಈ ಬೆಳೆಯಲ್ಲಿ ಬೇರು ಮತ್ತು ಬುಡ ಕೊಳೆ ರೋಗದ ಭಾದೆ ಕಂಡು ಬಂದಿದೆ.
ಬಾಧೆಯ ಲಕ್ಷಣಗಳು- ಕಂದು ಅಥವಾ ಕಪ್ಪು ಕೊಳೆ ಲಕ್ಷಣಗಳು ಗಿಡದ ಬೇರು ಮತ್ತು ಕಾಂಡದ ಮೇಲೆ ಕಂಡು ಬರುವವು, ಗಿಡ ಸೊರಗುವುದು ಮತ್ತು ಸಾಯುವದು.
ನಿರ್ವಹಣೆ- ಬೇರು ಮತ್ತು ಬುಡ ಕೊಳೆ ರೋಗದ ಹತೋಟಿಗಾಗಿ 2 ಗ್ರಾಂ. ಸಂಯುಕ್ತ ಶಿಲೀಂಧ್ರನಾಶಕಗಳಾದ ಕಾರ್ಬಾಕ್ಸಿನ್ + ಥೈರಾಮ್ ಅಥವಾ ಕಾರ್ಬೆನ್ಡೈಜಿಮ್ + ಮ್ಯಾಂಕೋಜೆಬ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ರೋಗ ಬಾಧಿತ ಸಸಿಗಳ ಬುಡಕ್ಕೆ ಹಾಗೂ ಸುತ್ತಮುತ್ತಲಿನ ಆರೋಗ್ಯವಂತ ಸಸಿಗಳ ಬೇರು ತೊಯ್ಯುವ ಹಾಗೆ ಹಾಕಬೇಕು.
ಗೊಣ್ಣೆ ಹುಳುವಿನ ಬಾಧೆ
ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಶೇಂಗಾ, ಸೋಯಾ ಮತ್ತು ಅವರೆ ಹಾಗೂ ಮತ್ತಿತರ ಬೆಳೆಗಳಿಗೆ ಗೊಣ್ಣೆ ಹುಳುವಿನ ಬಾಧೆ ಕಂಡು ಬಂದಿದೆ.
ನಿರ್ವಹಣೆ- ಬಾಧಿತ ಗಿಡದ ಸುತ್ತಲು ಕ್ಲೊರ್ಪೈರಿಫಾಸ್ ಹರಳು ರೂಪದ ಕೀಟನಾಶಕವನ್ನು ಪ್ರತಿ ಎಕರೆಗೆ 5 ಕೆ.ಜಿ ಯಂತೆ ಬಳಸಬೇಕು. ನಂತರ ಬೆಳೆ ಕೋಯ್ಲಾದ ನಂತರ ಹಿಂಗಾರು ಬಿತ್ತನೆಯ 15 ದಿನಗಳ ಮುಂಚೆ ಪ್ರತಿ ಎಕರೆಗೆ 5 ಕೆ.ಜಿ ಮೆಟಿರೈಜಿಯಂ ಅನಿಸೋಪ್ಲೆ ಜೈವಿಕ ಶಿಲೀಂಧ್ರ ನಾಶಕವನ್ನು ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಮಣ್ಣಿನಲ್ಲಿ ಬೆರೆಸಬೇಕು.
ಹತ್ತಿ
30 ರಿಂದ 45 ದಿವಸದ ಬೆಳೆಯಿದ್ದು ರಸ ಹೀರುವ ಕೀಟಗಳು ಕಂಡು ಬಂದಿದ್ದು ನಂತರ ದಿನಗಳಲ್ಲಿ ಚೂಪು ಮೂತಿ ಹುಳು ಹಾಗೂ ರೋಗಗಳ ಬಾಧೆ ಕಂಡು ಬಂದರೆ ಕೆಳಗೆ ತಿಳಿಸಿದ ನಿರ್ವಹಣಾ ಕ್ರಮಗಳನ್ನು ಅನುಸರಿಸಿರಿ.
ಪ್ರಮುಖ ರಸ ಹೀರುವ ಕೀಟಗಳು ಅಥವಾ ಜಿಗಿ ಹುಳು, ಥ್ರಿಪ್ಸನುಸಿ, ಹೇನು ಬಿಳಿನೋಣ, ಮಿರಿಡ್ ತಿಗಣಿ ಇತ್ಯಾದಿ.
ನಿರ್ವಹಣಾ ಕ್ರಮಗಳು- ರಸ ಹೀರುವ ಕೀಟಗಳ ಭಾದೆ ಕಂಡುಬಂದಲ್ಲಿ ಶೇ. 5 ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಕೀಟನಾಶಕ ಅಥವಾ ಅಂತರವ್ಯಾಪಿ ಕೀಟನಾಶಕಗಳಾದ 0.10 ಗ್ರಾಂ ಫಿಪ್ರೊನಿಲ್ 80 ಡಬ್ಲು.ಜಿ ಅಥವಾ 0.075 ಗ್ರಾಂ ಕ್ಲೋಥೈನಿಡಿಯಾನ್ 50 ಡಬ್ಲೂ.ಡಿಜಿ ಅಥವಾ 1.5 ಮಿ. ಲೀ. ಆಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ ಅಥವಾ 2.0 ಮಿ.ಲೀ. ಡೈಮಿಥೊನೆಲಿಟ್ 30 ಇ.ಸಿ. ಅಥವಾ 0.2 ಗ್ರಾಂ ಅಸಿಟಾಮಿಪ್ರಿಡ್ 20 ಎಸ್. ಪಿ ಅಥವಾ 0.2 ಗ್ರಾಂ ಥೈಯಾಮೆಥಾಕ್ಷಾಮ್ 25 ಡಬ್ಲೂಜಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿರಿ
ಮೂತಿ ಹುಳುವಿನ ನಿರ್ವಹಣೆಗೆ 20 ಸಾಲಿಗೆ ಒಂದರಂತೆ ಬೆಂಡೆ ಬೆಳೆಯನ್ನು ಬಲೆ ಬೆಳೆಯಾಗಿ ಬೆಳೆಯಬೇಕು.
ಕೀಟದ ಬಾಧೆ ಕಂಡುಬಂದಾಗ 1.0 ಮಿ.ಲೀ. ಸೋಲೋಮನ್ 300 ಔಆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿರಿ.
ರೋಗಗಳು
ಹತ್ತಿ ಬೆಳೆಯಲ್ಲಿ ಮಜ್ಜಿಗೆ ರೋಗ ಅಥವಾ ಬೂದು ರೋಗದ ಲಕ್ಷಣಗಳೆಂದರೆ ಶಿಲೀಂದ್ರದ ಬಿಳಿ ಪದಾರ್ಥವು ಮಜ್ಜಿಗೆ ಚೆಲ್ಲಿದ ಹಾಗೆ ಎಲೆಗಳ ಹಿಂಭಾಗದಲ್ಲಿ ಕಂಡು ಬಂದು, ರೋಗದ ತೀವ್ರತೆಯ ಹಂತದಲ್ಲಿ ಎಲೆಗಳು ಉದುರುತ್ತವೆ. ಈ ರೋಗದ ಹತೋಟಿಗಾಗಿ 1 ಗ್ರಾಂ ಕಾರ್ಬೆನ್ಡೈಜಿಮ್ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
ಎಲೆ ಚುಕ್ಕೆ ರೋಗವನ್ನು ಹತೋಟಿ ಮಾಡಲು ಪ್ರತಿ ಲೀಟರ್ ನೀರಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮ್ಯಾಂಕೋಜೆಬ್ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.