ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತ ಷಡ್ಯಂತ್ರ ಏನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಿರಂಗಪಡಿಸಬೇಕು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಗ್ರಹಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ. ಆ ಷಡ್ಯಂತ್ರ ಏನು ಎಂಬುದನ್ನು ಬಹಿರಂಗಪಡಿಸಬೇಕು; ಸತ್ಯ ಹೇಳುವುದಕ್ಕೆ ನಿಮಗೆ ಹೆದರಿಕೆಯೇ ಉಪಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.
ಸತ್ಯ ಹೇಳುವುದಕ್ಕೆ ನಿಮಗೆ ಹೆದರಿಕೆ ಇಲ್ಲ ಎನ್ನುವುದಾದರೆ ಆ ಷಡ್ಯಂತ್ರ ಮತ್ತು ರಾಜಕಾರಣದ ಷಡ್ಯಂತ್ರದ ಶಕ್ತಿ ಯಾವುದು ಎನ್ನುವುದನ್ನು ಬಹಿರಂಗ ಪಡಿಸುವ ಅವಶ್ಯಕತೆ ಇದೆ. ಈಗ ಸತ್ಯ ಹೇಳದಿದ್ದರೆ ನೀವು ಯಾವಾಗ ಸತ್ಯ ಹೇಳುತ್ತೀರಿ? ಸತ್ಯ ಹೇಳುವುದಕ್ಕೆ ಇದೇ ಸೂಕ್ತವಾದ ಸಮಯ; ಷಡ್ಯಂತ್ರ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದ ಅವರು ಒತ್ತಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಹುಟ್ಟು ಹಾಕಿರುವುದು ಷಡ್ಯಂತ್ರದ ಒಂದು ಭಾಗ. ಷಡ್ಯಂತ್ರದ ಹಿಂದೆ ಮತಾಂಧತೆ ಮತ್ತು ಮತಾಂತರ ಮಾಡುವ ಮಾಫಿಯಾ ಇದೆ. ಒಮ್ಮೆ ಶ್ರದ್ಧಾಭಂಗವಾದರೆ ಅದರ ಲಾಭವನ್ನು ಪಡೆಯಬೇಕೆಂಬ ಹುನ್ನಾರ ಇದೆ ಎಂದು ದೂರಿದರು.
ಹಿಂದೆ ನಾವು ಸಣ್ಣ ಮಕ್ಕಳಿದ್ದಾಗ ನಮಗೆ ಹುಂಡಿಗೆ ಮುಡಿಪು ಹಾಕಿಸುತ್ತಿದ್ದರು. ಅದನ್ನು ತೆಗೆದುಕೊಂಡು ಬಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅರ್ಪಣೆ ಮಾಡಿಸುತ್ತಿದ್ದರು. ಇದು ನನ್ನೊಬ್ಬನದಲ್ಲ; ನಮ್ಮ ಪೂರ್ವಿಕರಿಂದಲೂ ಬೆಳೆದು ಬಂದಿದೆ. ಅಂತಹ ಒಂದು ಶ್ರದ್ಧೆಯನ್ನು ಭಂಗ ಮಾಡುವ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಧರ್ಮಸ್ಥಳದಲ್ಲಿನ ತನಿಖೆಯನ್ನು ನಾವು ಪ್ರಶ್ನಿಸುವುದಿಲ್ಲ. ತನಿಖೆಯ ಮೊದಲೇ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡಿದ್ದ ವ್ಯಕ್ತಿಗಳ ಹಿನ್ನೆಲೆಯೂ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ಹೇಳಿದ ಕಡೆ ಗುಂಡಿಯನ್ನು ತೋಡಿದ್ದು, ನಿಮಗೆ ಏನು ಸಿಕ್ಕಿತು ಎಂದು ಪ್ರಶ್ನಿಸಿದರು. ಇದು ಕಪೋಲಕಲ್ಪಿತ ಮತ್ತು ಷಡ್ಯಂತ್ರದ ಭಾಗ ಎನ್ನುವುದು ಮುಖ್ಯಮಂತ್ರಿಗಳಿಗೆ ಅನ್ನಿಸುವುದಿಲ್ಲವೇ; ನಿಮಗೆ ಷಡ್ಯಂತ್ರದ ಭಾಗ ಅನ್ನಿಸಿದ್ದರೆ ಈ ಷಡ್ಯಂತ್ರ ನಡೆಸಿದವರ ಮೂಲ ಪತ್ತೆ ಹಚ್ಚಿ; ಅವರಿಗೆ ಶಿಕ್ಷೆ ಆಗಬೇಕು. ಆಗ ಮಾತ್ರ ಧರ್ಮಸ್ಥಳದ ಭಕ್ತರಿಗೆ ಸಮಾಧಾನವಾಗುತ್ತದೆ ಎಂದು ಅವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳೇ, ನಿಮಗೆ ಸಂವಿಧಾನದ ಮೇಲೆ ನಂಬಿಕೆ ಇದ್ದರೆ; ನಿಮಗೆ ಧರ್ಮಸ್ಥಳದ ಬಗ್ಗೆ ಗೌರವವಿದ್ದರೆ; ಧರ್ಮಸ್ಥಳದ ಭಕ್ತರ ಭಾವನೆಗಳನ್ನು ಗೌರವಿಸುವುದಾದರೆ ಅನಾಮಿಕ ವ್ಯಕ್ತಿಯ ತನಿಖೆ ಆಗಬೇಕು ಮತ್ತು ಅನಾಮಿಕ ವ್ಯಕ್ತಿಯ ಹಿಂದೆ ಇರುವವರ ತನಿಖೆ ಮಾಡಬೇಕು ಎಂದು ಅವರು ತಿಳಿಸಿದರು.
Rain In Karnataka: ನಾಳೆಯಿಂದ ಆ.23ರವರೆಗೆ ರಾಜ್ಯಾಧ್ಯಂತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ
ಧರ್ಮಸ್ಥಳದ ಕುರಿತ ನಿರಂತರ ಅಪಪ್ರಚಾರಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ: ಸಿಎಂ ಜನತೆ ಕ್ಷಮೆಗೆ ಒತ್ತಾಯ