ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಘೋರ ಘಟನೆ ಒಂದು ನಡೆದಿದ್ದು ಮದುವೆಯಾದ ಮೂರೇ ತಿಂಗಳಲ್ಲಿ ಗೃಹಿಣಿ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನಗರದ ನಂದಗೋಕುಲ ಬಡಾವಣೆಯಲ್ಲಿ ಘಟನೆ ನಡೆದಿದೆ. ಮೃತ ಗೃಹಿಣಿಯನ್ನ ಜಯಶ್ರೀ ಬಡಿಗೇರ್ (31) ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿ ನಗರದ ನಂದಗೋಕುಲ ಬಡವಾಣೆಯಲ್ಲಿ ಇಂದು ಮುಂಜಾನೆ ತನ್ನ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ಜಯಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇಂದು ಮುಂಜಾನೆ ಜಯಶ್ರೀ ಹೆತ್ತವರಿಗೆ ಕರೆ ಮಾಡಿದ ಜಯಶ್ರೀ ಪತಿ ಶಿವಾನಂದ್ ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದನಂತೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆತ್ತವರು ತಮ್ಮ ಮಗಳದ್ದು ಆತ್ಮಹತ್ಯೆಯಲ್ಲ, ಪತಿಯೇ ಕೊಲೆ ಮಾಡಿರೋ ಶಂಕೆಯಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಇನ್ನು ಜಯಶ್ರೀ ಪತಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜಯಶ್ರೀ ಮದುವೆಯಾಗೋ ಮುಂಚೆ, ಆತನಿಗೆ ಬೇರೊಂದು ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಜಯಶ್ರೀಗೆ ಪತಿಯ ಮಾಜಿ ಲವರ್ ಇನಸ್ಟಾಗ್ರಾಂ ನಲ್ಲಿ ಶಿವಾನಂದ್ ಜೊತೆ ತನ್ನ ಪ್ರೀತಿ ಇರೋದನ್ನು ತಿಳಿಸಿದ್ದಾಳೆ. ಅನೇಕ ಪೋಟೋಗಳನ್ನು ಕೂಡಾ ಜಯಶ್ರೀಗೆ ಕಳುಹಿಸಿದ್ದಳಂತೆ. ಅದ್ರೆ, ಶಿವಾನಂದ್ ಪ್ರೀತಿ ಬಗ್ಗೆ ಮುಚ್ಚಿಟ್ಟು ಜಯಶ್ರೀಯನ್ನು ವಿವಾಹವಾಗಿದ್ದನಂತೆ.
ಪತಿಯ ಹಿಂದಿನ ಪ್ರೇಮ ಕಹಾನಿ ಗೊತ್ತಾದ ಮೇಲೆ ಸಹ ಸುಮ್ಮನಾಗಿದ್ದ ಜಯಶ್ರೀ, ಆಗಸ್ಟ್ 4 ರಂದು ಮತ್ತೆ ಪತಿ ಮನೆಗೆ ಬಂದಿದ್ದಳಂತೆ. ಹಳೆದಯನ್ನು ಮರೆತು ಜೀವನ ಸಾಗಿಸೋ ನಿರ್ಧಾರಕ್ಕೆ ಬಂದಿದ್ದಳಂತೆ. ಆದ್ರೆ ಶಿವಾನಂದ್, ಜಯಶ್ರೀಗೆ ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ. ಹೆತ್ತವರ ಜೊತೆ ಮಾತನಾಡಲು ಕೂಡಾ ಬಿಡ್ತಿರಲಿಲ್ಲವಂತೆ. ಈ ಸಂಬಂಧ ಕಳದ ರಾತ್ರಿ ಸಹ ಇಬ್ಬರ ನಡುವೆ ಜಗಳವಾಗಿದ್ದು, ಬೆಳಗಾಗುವುದರಲ್ಲೇ ಜಯಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮೂಲತ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ನಿವಾಸಿಯಾಗಿದ್ದ ಜಯಶ್ರೀ ವಿವಾಹ, ಹುಬ್ಬಳ್ಳಿಯ ನಂದಗೋಕುಲ ಬಡಾವಣೆ ನಿವಾಸಿ ಶಿವಾನಂದ್ ಬಡಿಗೇರ್ ಅನ್ನೋನ ಜೊತೆ ಕಳೆದ ಮೇ 21 ರಂದು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. ವಿವಾಹವಾದ ನಂತರ ಕೂಡಾ ಧಾರವಾಡದಲ್ಲಿ ಲೈಬ್ರರಿ ಸೈನ್ಸ್ ಕೋರ್ಸ್ ಗೆ ಪ್ರವೇಶ ಪಡೆದಿದ್ದ ಜಯಶ್ರೀ, ಪ್ರತಿನಿತ್ಯ ಕಾಲೇಜಿಗೆ ಹುಬ್ಬಳ್ಳಿಯಿಂದ ಹೋಗಿ ಬರುತ್ತಿದ್ದಳು. ಇದೀಗ ಬಾರದ ಲೋಕಕ್ಕೆ ಜಯಶ್ರೀ ಪಯಣ ಬೆಳೆಸಿದ್ದಾಳೆ.