ರಾಮನಗರ : ಹೈ ಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ, ಸಚಿವ ಕೆ.ಎನ್ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಿರುವುದು ಹೈಕಮಾಂಡ್ ತೀರ್ಮಾನ. ಕೇಂದ್ರದ ವರಿಷ್ಠರ ತೀರ್ಮಾನದಲ್ಲಿ ರಾಜ್ಯ ನಾಯಕರ ಪಾತ್ರ ಇಲ್ಲ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಈ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ನಮ್ಮದು ಶಿಸ್ತಿನ ಪಕ್ಷ, ವರಿಷ್ಠರು ತೆಗೆದುಕೊಂಡ ತೀರ್ಮಾನಕ್ಕೆ ತಲೆಬಾಗಲೇಬೇಕು. ರಾಹುಲ್ ಗಾಂಧಿಯವರು ನಮ್ಮ ರಾಷ್ಟ್ರ ನಾಯಕರು. ಚುನಾವಣಾ ಅಕ್ರಮದ ಬಗ್ಗೆ ದೊಡ್ಡ ಹೋರಾಟ ಮಾಡ್ತಿದ್ದಾರೆ. ಆ ಹೋರಾಟಕ್ಕೆ ನಾವೆಲ್ಲ ಬೆಂಬಲ ಕೊಡಬೇಕು, ಶಕ್ತಿ ತುಂಬಬೇಕು. ನಾವು ಆ ಕೆಲಸ ಮಾಡ್ತಿದ್ದೇವೆ, ಅದನ್ನ ಬಿಟ್ಟು ಬೇರೆ ವಿಚಾರ ಗೊತ್ತಿಲ್ಲ ಎಂದರು.
ಕೆ.ಎನ್.ರಾಜಣ್ಣಗೆ ಬಿಜೆಪಿಯಿಂದ ಆಫರ್ ನೀಡುವ ಚರ್ಚೆ ವಿಚಾರ ಕುರಿತು ಮಾತನಾಡಿ, ರಾಜಣ್ಣ ಅವರ ಬಗ್ಗೆ ನಮಗೆ ಗೌರವವಿದೆ. ಅವರು ನಮ್ಮ ನಾಯಕರು, ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನ ಹೊಂದಿರುವವರು. ಸಾಕಷ್ಟು ವರ್ಷದಿಂದ ಪಕ್ಷ ಕಟ್ಟಿ, ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ, ನಮ್ಮ ಪಕ್ಷದಲ್ಲೇ ಇರ್ತಾರೆ ಎಂದು ತಿಳಿಸಿದರು.
ರಾಜಣ್ಣ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡಿದ್ದಾರೆಂಬ ಬಿಜೆಪಿ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಡಿಸಿಎಂ ಡಿಕೆಶಿಯವರು ನಮ್ಮ ರಾಜ್ಯದ ಅಧ್ಯಕ್ಷರು. ಆದರೆ ಈ ತೀರ್ಮಾನ ಮಾಡಿರೋದು ನಮ್ಮ ಕೇಂದ್ರದ ನಾಯಕರು. ಇಲ್ಲಿ ಪಿತೂರಿ, ಷಡ್ಯಂತ್ರ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದರು.