ಬೆಂಗಳೂರು: ʻಪರಮ್ ಕಲ್ಚರ್ʼ ಅರ್ಪಿಸುವ ಪರಂಪರಾ ಸರಣಿಯ ೦೭ನೇ ಕಾರ್ಯಕ್ರಮ ‘ವಂದೇ ಮಾತರಮ್’ ಆಗಸ್ಟ್ 14ರಂದು, ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ.ಸಿ ಅಶ್ವತ್ಥ್ ಕಲಾಭವನದಲ್ಲಿ ನಡೆಯಲಿದೆ.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ, ಆಗಸ್ಟ್ ೧೪ನೇ ತಾರೀಖು ಸಂಜೆ, ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ಶಂಕರ ಶಾನುಭೋಗ್ ಅವರ ತಂಡದಿಂದ ದೇಶಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಟ್ಟ ಸಂದರ್ಭವನ್ನೂ, ವೀರರನ್ನೂ ಸ್ಮರಿಸಿ, ರಾಷ್ಟ್ರ ಭಕ್ತಿಯನ್ನು ಜಾಗೃತಗೊಳಿಸುವಂತಹ ಗೀತೆಗಳ ಗಾಯನ ಕಾರ್ಯಕ್ರಮ ಇದಾಗಿದೆ. ಸಹಗಾಯನದಲ್ಲಿ ಮೇಘನಾ ಹಳಿಯಾಳ, ಕೀಬೋರ್ಡ್‌ನಲ್ಲಿ ಕೃಷ್ಣ ಉಡುಪ, ತಬಲಾದಲ್ಲಿ ಸುದತ್ತ ಎಲ್ ಶ್ರೀಪಾದ್, ಕೊಳಲಿನಲ್ಲಿ ರಮೇಶ್ ಕುಮಾರ್ ಜಿ.ಎಲ್., ರಿದಂ ಪ್ಯಾಡ್‌್ಡನಲ್ಲಿ ಪದ್ಮನಾಭ ಕಾಮತ್ ಹಾಗೂ ಢೋಲಕ್‌ನಲ್ಲಿ ಲೋಕೇಶ್ ಆರ್. ಅವರು ಸಹಕರಿಸಲಿದ್ದಾರೆ.
ಏನಿದು ಪರಂಪರಾ?
“ಪರಮ್ ಕಲ್ಚರ್” ಪ್ರಸ್ತುತಪಡಿಸುವ ‘ಪರಂಪರಾ’ ಸರಣಿ ಬಹು ಜನಪ್ರಿಯವಾಗಿರುವಂತಹ ಕಾರ್ಯಕ್ರಮ. ಈಗಾಗಲೇ ನಡೆದಿರುವ ಪ್ರತಿಯೊಂದರ ವಿಷಯವಸ್ತುವೂ ವಿಭಿನ್ನವಾಗಿದ್ದು, ಪ್ರೇಕ್ಷಕರಿಂದಲೂ ಕಲಾವಿದರಿಂದಲೂ ಪ್ರಶಂಸಿಸಲ್ಪಟ್ಟಿದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸೇರಿ ಭರತನಾಟ್ಯ, ಚಿತ್ರಕಲಾ ಪ್ರದರ್ಶನ ಇವೆಲ್ಲ ಕಾರ್ಯಕ್ರಮಗಳ ಜೊತೆಗೆ, ‘ವೀರ ಸಂನ್ಯಾಸಿಯ ಆತ್ಮಗೀತೆ’ ಎಂಬ ಅದ್ಭುತವಾದ ಮಲ್ಟಿಮೀಡಿಯಾ ಪ್ರೊಡಕ್ಷನ್ ಕೂಡ ಪರಂಪರಾ ಸರಣಿಯಲ್ಲಿ ಪ್ರದರ್ಶಿಸಲ್ಪಟ್ಟಿದೆ.
ಆತ್ಮೀಯರಿಗೆ ಪ್ರೀತಿಯಿಂದ ಪತ್ರ ಬರೆಯಿರಿ!
ಗಾಯನದ ಜೊತೆಯಲ್ಲಿ, ಪತ್ರ ಬರೆಯುವ ಕಲೆಯನ್ನು ಪುನಃ ನೆನಪಿಸುವ ಸಲುವಾಗಿ, ಇಂಡಿಯಾ ಪೋಸ್ಟ್‌ನ ಸಹಯೋಗದೊಂದಿಗೆ, ನಮ್ಮಲ್ಲಿನ ಕಲಾವಿದರೇ ರಚಿಸಿದ ಚಿತ್ರಗಳನ್ನೊಳಗೊಂಡ ಅಂಚೆ ಪತ್ರಗಳ ಪ್ರದರ್ಶನ, ಮಾರಾಟವೂ ಇರುತ್ತದೆ. ಇದರಲ್ಲಿ ತಮ್ಮ ಆತ್ಮೀಯರಿಗೆ ಸಂದೇಶವನ್ನು ಬರೆದು ಕಳುಹಿಸುವ ವ್ಯವಸ್ಥೆಯೂ ಇರುತ್ತದೆ.
ಸಮಯ ಹೀಗಿದೆ..
ಸಂಜೆ 5.30ಕ್ಕೆ ಪತ್ರಗಳ ಪ್ರದರ್ಶನ
6.30ಕ್ಕೆ ಸಂಗೀತ ಕಾರ್ಯಕ್ರಮ
ಉಚಿತ ಪ್ರವೇಶ
ದೇಶದ ಹಬ್ಬ ಸ್ವಾತಂತ್ರ್ಯ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಲು ಪರಮ್ ಸಂಸ್ಥೆ ಮುಂದಾಗಿದೆ. ಹೀಗಾಗಿ ಈ ಸಂಗೀತ ಕಾರ್ಯಕ್ರಮ ಉಚಿತವಾಗಿದ್ದು, ಕಲಾರಸಿಕರು ಬಂದು ರಾಷ್ಟ್ರಭಕ್ತಿಯ ಅನುಭೂತಿಯನ್ನು ಪಡೆಯಬಹುದಾಗಿದೆ.