ಬೆಂಗಳೂರು : ಇತ್ತೀಚೆಗೆ ರಾಜ್ಯ ಸರ್ಕಾರ ಬಿ ಖಾತೆಯ ಎಲ್ಲಾ ಸೈಟುಗಳನ್ನು ಎ ಖಾತೆಗೆ ಬದಲಾಯಿಸಲು ಅವಕಾಶವನ್ನು ಕಲ್ಪಿಸಿದೆ. ಅದರಂತೆ ಬಿ ಖಾತಾ ಹೊಂದಿರುವ ಸೈಟುಗಳ ಮಾಲೀಕರು ಆನ್ ಲೈನ್ ನಲ್ಲೇ ಅರ್ಜಿಯನ್ನು ಸಲ್ಲಿಸಿ ತಮ್ಮ ಸೈಟನ್ನು ಎ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಈ ಸೌಲಭ್ಯವನ್ನು ಸದ್ಯದಲ್ಲೇ ರಾಜ್ಯಾದ್ಯಂತ ಜಾರಿಗೊಳಿಸಲು ಚಿಂತನೆ ನಡೆಸಿರುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 330ರಡಿ ಜೆಡಿಎಸ್ನ ಸಿ.ಎನ್.ಮಂಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನಲ್ಲಿ ‘ಬಿ’ ಖಾತಾ ಸ್ವತ್ತುಗಳಿಗೆ ‘ಎ’ ಖಾತಾ ನೀಡಲು ನಿರ್ಧರಿಸಲಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸುವುದಕ್ಕೆ ಒತ್ತಡ ಇದೆ”ಎಂದರು. ”ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕಂದಾಯ ಭೂಮಿಯಲ್ಲಿನಿರ್ಮಿಸಿರುವ ಬಡಾವಣೆಗಳನ್ನು ಅನಧಿಕೃತವೆಂದು ಘೋಷಿಸಲಾಗಿದೆ. ಇಂಥ ಬಡಾವಣೆಗಳಲ್ಲಿನಿವೇಶನಗಳಿಗೆ ಖಾತಾ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು.
ಅನಧಿಕೃತ ಬಡಾವಣೆಗಳ ನಿರ್ಮಾಣ ತಡೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ- 1960ರ ಕಲಂ 17(4)ರ ಅಡಿಯಲ್ಲಿಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಕ್ರಮ ಬಡಾವಣೆಗಳ ನಿರ್ಮಾಣ ತಡೆಗಟ್ಟಲು ವಿಫಲರಾಗುವ ಅಧಿಕಾರಿಗಳಿಗೆ ದಂಡ ವಿಧಿಸುವ ಅಥವಾ ಅಮಾನತು ಮಾಡುವ, ಸೇವೆಯಿಂದಲೇ ವಜಾಗೊಳಿಸುವ ಅಧಿಕಾರವನ್ನು ಸರಕಾರ ಹೊಂದಿದೆ ಎಂದರು.