ವಿಜಯಪುರ : ವಿಜಯಪುರದಲ್ಲಿ ಘೋರವಾದ ದುರಂತವೊಂದು ನಡೆದಿದ್ದು, ಆಟವಾಡಲು ಹೋಗಿ ಬಾಲಕಿಯೋರ್ವಳು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧನಸಿಂಗ್ ತಾಂಡಾದಲ್ಲಿ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ಅರ್ಚನಾ ದೀಪಕ್ ರಾಠೋಡ (8) ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಬಾಲಕಿ ತನ್ನ ತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದಳು. ಈ ವೇಳೆ ಆಟವಾಡುತ್ತಿದ್ದ ಬಾಲಕಿ ಆಯಾತಪ್ಪಿ ಬಾವಿಗೆ ಬಿದ್ದಿದ್ದಾಳೆ.
ಬಾಲಕಿ ಬಾವಿಗೆ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ ಸದ್ಯ ಬಾಲಕಿಯ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಕುರಿತು ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.