ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿಯನ್ನಾಗಿ ಬದಲಾಯಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಕಾರಣಾಂತರಗಳಿಂದ ಮುಂದೂಡುತ್ತಾ ಬರಲಾಗಿತ್ತು. ಆದರೆ ಇದೀಗ ಈ ವರ್ಷ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಇಲ್ಲ ಎಂದು ಹೈಕೋರ್ಟ್ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಬಿಬಿಎಂಪಿಯನ್ನು (BBMP) 5 ಪಾಲಿಕೆಗಳಾಗಿ ವಿಭಜಿಸಲಾಗುತ್ತಿದೆ. ಐದು ಪಾಲಿಕೆಗಳಿಗೆ ಜನವರಿ ವೇಳೆಗೆ ಚುನಾವಣೆ ಸಾಧ್ಯತೆ ಇದೆ. ಅಲ್ಲಿಯ ವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಮುಂದೂಡಲಾಗಿದೆ ಎಂದು ಎಜಿ ತಿಳಿಸಿದ್ದಾರೆ.
ಮೇ 5ರಿಂದ ಗ್ರೇಟರ್ ಬೆಂಗಳೂರು ಜಾರಿಗೆ ಬರುವಂತೆ ಸರ್ಕಾರ ಇತ್ತೀಚೆಗೆ ಅಧಿಕೃತ ಅಧಿಸೂಚನೆ ಹೊರಡಿಸಿತ್ತು. ಬೃಹತ್ ಬೆಂಗಳೂರನ್ನು ವಿಭಜಿಸುವ ವರದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ಕೂಡ ನೀಡಿತ್ತು. ಬಿಬಿಎಂಪಿ ಸುಧಾರಣಾ ಸಮಿತಿ ಅಧ್ಯಕ್ಷ ಬಿ.ಎಸ್. ಪಾಟೀಲ್ ಸಮಿತಿ ನೀಡಿದ್ದ ವರದಿಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ಸಂಪುಟ ಸಭೆ ಒಪ್ಪಿಗೆ ನೀಡಿತ್ತು.
ಬಿಬಿಎಂಪಿಯನ್ನು 5 ಭಾಗಗಳಾಗಿ ವಿಭಜಿಸುವ ಹಾಗೂ 400 ವಾರ್ಡ್‌ಗಳನ್ನು ವಿಂಗಡಿಸುವ ಬಹು ಚರ್ಚಿತ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಅನುಮೋದಿಸಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿ 708 ಚ.ಕಿ.ಮೀ. ಇದ್ದು, ಜಿಬಿಎ ವ್ಯಾಪ್ತಿ 1400 ಚ.ಕಿ.ಮೀ.ಗೆ ವಿಸ್ತರಣೆಯಾಗಲಿದೆ.