ಬೆಂಗಳೂರು : ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದು, ಮಾತೃ ಭಾಷೆ ಕನ್ನಡ ಹಾಗೂ ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವ ಶಿಫಾರಸಿನೊಂದಿಗೆ ಒಟ್ಟು 97 ಶಿಫಾರಸುಗಳನ್ನು ಮಾಡಿದೆ.
ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಅಕ್ಟೋಬರ್ 11, 2023ರಂದು ಆದೇಶ ಹೊರಡಿಸಿ ಶಿಕ್ಷಣ ನೀತಿಯನ್ನು ರೂಪಿಸಲು ನೇಮಿಸಿತು. ಪ್ರೊ. ಸುಖದೇವ್ ಥೋರಾಟ್ ಅವರ ಅಧ್ಯಕ್ಷತೆಯಲ್ಲಿ 17 ಸದಸ್ಯರು, 6 ವಿಷಯ ತಜ್ಞರು/ಸಲಹೆಗಾರರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿಯೊಂದಿಗೆ ಈ ಆಯೋಗ ಕಾರ್ಯಾರಂಭ ಮಾಡಿತು. ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿರುವ ಆಯೋಗ ಶುಕ್ರವಾರ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದೆ.
ಶಾಲಾ ಶಿಕ್ಷಣದ ಶಿಫಾರಸುಗಳು:
* 2+8+4 ರಚನೆಯನ್ನು ಅಳವಡಿಸಿಕೊಳ್ಳಲು ಶಿಫಾರಸು: 2 ವರ್ಷ ಪೂರ್ವ-ಪ್ರಾಥಮಿಕ, 8 ವರ್ಷ ಪ್ರಾಥಮಿಕ, ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣ.
* ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು.
* ರಾಜ್ಯದಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು.
* ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಬೇಕು.
* 2 ವರ್ಷಗಳ ಪೂರ್ವ-ಪ್ರಾಥಮಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಾಲೆಗಳಿಗೆ ಲಗತ್ತಿಸಬೇಕು.
* ಪ್ರತ್ಯೇಕ ನಿಯಂತ್ರಣ ಚೌಕಟ್ಟಿನ ಮೂಲಕ ಖಾಸಗಿ ಪೂರ್ವ-ಪ್ರಾಥಮಿಕ ಶಾಲೆಗಳನ್ನು ನಿಯಂತ್ರಿಸಬೇಕು.
* ಹಂತ-ಹಂತವಾಗಿ RTE ವ್ಯಾಪ್ತಿಯನ್ನು 4-18 ವಯಸ್ಸಿನವರಿಗೆ ವಿಸ್ತರಿಸಬೇಕು.
* ಸರ್ಕಾರಿ ಶಾಲಾ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳಿಗೆ ಸಮನಾಗಿ ಹೆಚ್ಚಿಸಬೇಕು.
* ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮವನ್ನು (CCSE) ಅಭಿವೃದ್ಧಿಪಡಿಸಬೇಕು.
* NCERT ಪಠ್ಯಪುಸ್ತಕಗಳ ಅವಲಂಬನೆಯನ್ನು ಕೊನೆಗೊಳಿಸಿ, ವಿಷಯಗಳನ್ನು ಸ್ಥಳೀಯಗೊಳಿಸಬೇಕು.
* ಗುತ್ತಿಗೆ/ಅತಿಥಿ ಶಿಕ್ಷಕರ ನೇಮಕಾತಿಗಳನ್ನು ನಿಲ್ಲಿಸಬೇಕು.
* ಹೆಚ್ಚಿನ ಖಾಸಗೀಕರಣವನ್ನು ತಡೆಗಟ್ಟಬೇಕು.
* ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆಯ ರಚನೆ.
* ಶೈಕ್ಷಣಿಕ ಪರಿಣಾಮಕ್ಕಾಗಿ ಬ್ಲಾಕ್ ಶಿಕ್ಷಣ ಕಚೇರಿಗಳಿಗೆ ಅಧಿಕಾರ ನೀಡುವುದು.
* ಭಾರತೀಯ ಜ್ಞಾನ ವ್ಯವಸ್ಥೆ ಕೋರ್ಸ್ ರಚನೆಗೆ ಒಂದು ಅಲಾಯದ ರಾಜ್ಯ ಸಮಿತಿ ರಚಿಸುವುದು.
* ಸಮಾನಾಂತರ ಏಜೆನ್ಸಿಗಳನ್ನು ಸಮಗ್ರ ಆಯುಕ್ತಾಲಯಕ್ಕೆ ವಿಲೀನಗೊಳಿಸಬೇಕು.
* DSERT ಅನ್ನು R&D ಗಾಗಿ ಸ್ವಾಯತ್ತ SCERT ಆಗಿ ಪರಿವರ್ತಿಸಬೇಕು.
* ಜೀವಮಾನ ಕಲಿಕೆ ನಿರ್ದೇಶನಾಲಯವನ್ನು ಪುನರುಜ್ಜಿವನಗೊಳಿಸಬೇಕು.
* ಸಂವಿಧಾನ ಮತ್ತು ವೈಜ್ಞಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಸಾರ್ವಜನಿಕ ಗ್ರಂಥಾಲಯಗಳನ್ನು ಬಳಸಿಕೊಳ್ಳುವ ಕುರಿತು ಪರಿಶೀಲಿಸಬೇಕು.
* ರಾಜ್ಯದ ಒಟ್ಟು ವೆಚ್ಚದಲ್ಲಿ ಶಿಕ್ಷಣದ ಪಾಲನ್ನು 30%ಕ್ಕೆ ಹೆಚ್ಚಿಸಬೇಕು.
* ಪ್ರತಿ ವಿದ್ಯಾರ್ಥಿಗೆ ವಾರ್ಷಿಕವಾಗಿ 5-10%ರಷ್ಟು ವೆಚ್ಚ ಹೆಚ್ಚಳವನ್ನು ಖಚಿತಪಡಿಸಬೇಕು.
* ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಮೀಸಲು ಬಜೆಟ್ ಹಂಚಿಕೆ ಮಾಡಬೇಕು.
* ರಾಜ್ಯದ ಜವಾಬ್ದಾರಿಗಳನ್ನು ಬದಲಿಸದೆ, ರಾಜೇತರ ಸಂಸ್ಥೆಗಳಿಂದ ಹೆಚ್ಚುವರಿ ನಿಧಿಯನ್ನು ಸಂಗ್ರಹಿಸಬೇಕು.
* ‘ಸಾಂವಿಧಾನಿಕ ಮೌಲ್ಯ ಶಿಕ್ಷಣ’ವನ್ನು ಕಡ್ಡಾಯ ವಿಷಯವನ್ನಾಗಿ ಮಾಡಬೇಕು.
* ಕರ್ನಾಟಕ ರಾಜ್ಯ ಮುಕ್ತ ಶಾಲಾ ವ್ಯವಸ್ಥೆಯನ್ನು ಸ್ಥಾಪಿಸಬೇಕು.