ಮಂಡ್ಯ : ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಸಮೀಪ ಶುಕ್ರವಾರ ತಡರಾತ್ರಿ ಜರುಗಿದೆ.
ಅರುಣ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಶುಕ್ರವಾರ ರಾತ್ರಿ 9.30 ವೇಳೆ ಸುಮಾರಿಗೆ ಅರುಣ್ ಮತ್ತು ಆತನ ಸ್ನೇಹಿತರು ಎಂ.ಟಿ.ಆರ್ ಬಾರ್ ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವೇಳೆ ಹಳೇ ವಿಚಾರವೊಂದಕ್ಕೆ ಪರಸ್ಪರ ಜಗಳ ಉಂಟಾಗಿದೆ. ಬಳಿಕ ಬಾರ್ ನಿಂದ ಸಿಬ್ಬಂದಿಗಳು ಎಲ್ಲರನ್ನು ಹೊರಗಡೆ ಕಳುಹಿಸಿದ್ದಾರೆ.
ಬಳಿಕ ಅರುಣ್ ಸ್ವಗ್ರಾಮ ವಡ್ಡರದೊಡ್ಡಿಗೆ ತೆರಳುವ ವೇಳೆ ಸೋಮನಹಳ್ಳಿ ಬಳಿಯ ಸ್ಕಂದ ಲೇಔಟ್ ಬಳಿ ಎಂಟತ್ತು ಮಂದಿ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ನರಳಿ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೆಸ್ತೂರು ಪೋಲೀಸರು ಶವವನ್ನು ಮಂಡ್ಯ ಮಿಮ್ಸ್ ಗೆ ರವಾನಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವರದಿ : ಗಿರೀಶ್ ರಾಜ್, ಮಂಡ್ಯ