ಯಾದಗಿರಿ : ರಾಜ್ಯದಲ್ಲಿ ಗುಡುಗು-ಸಿಡಿಲು ಸಮೇತ ಶುಕ್ರವಾರ ಭರ್ಜರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಯುವಕ ಮೃತಪಟ್ಟಿದ್ದಾನೆ. ಬೆಳಗಾವಿ, ರಾಯಚೂರು, ಯಾದಗಿರಿ, ಗದಗ, ಹಾವೇರಿ ಸೇರಿ ಆರೇಳು ಜಿಲ್ಲೆಗಳಲ್ಲಿ ಧಾರಾಕಾರ ವರ್ಷಧಾರೆಗೆ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ಹೊರವಲಯದಲ್ಲಿ ಪರಮಣ್ಣ ಕಕ್ಕೇರಾ (26) ಎಂಬ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಪರಮಣ್ಣ ತಮ್ಮ ಜಮೀನು ಕೆಲಸಕ್ಕೆ ಅಣ್ಣನ ಜತೆಗೆ ಹೋಗಿದ್ದ. ಗುಡುಗು ಸಹಿತ ಮಳೆ ಬರ್ತಿದ್ದಂತೆ ಅಣ್ಣ-ತಮ್ಮಂದಿರು ಗಿಡದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದಿದ್ದು, ಪರಮಣ್ಣ ಸ್ಥಳದಲ್ಲಯೇ ಮೃತಪಟ್ಟಿದ್ದಾನೆ. ಅಣ್ಣನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.