ಬೆಂಗಳೂರು: “ಸಂವಿಧಾನ, ಮತದಾನದ ಹಕ್ಕು ರಕ್ಷಣೆಗೆ ರಾಹುಲ್ ಗಾಂಧಿ ಅವರು ದಿಟ್ಟ ಹೋರಾಟ ಆರಂಭಿಸಿದ್ದಾರೆ. ಅದಕ್ಕೆ ನಮ್ಮೆಲ್ಲರ ಒಕ್ಕೊರಲ ಬೆಂಬಲವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೇಂದ್ರ ಚುನಾವಣೆ ಆಯೋಗ ಪ್ರಾಯೋಜಿತ ಮತ ಅಕ್ರಮದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಇದೊಂದು ಐತಿಹಾಸಿಕ ಹೋರಾಟ. ಮಲ್ಲಿಕಾರ್ಜುನ ಖರ್ಗೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಈಗ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಎತ್ತರಕ್ಕೆ ಬೆಳೆದಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ಸಂವಿಧಾನ ರಕ್ಷಣೆಗೆ ನಮ್ಮ ಮತ, ನಮ್ಮ ಹಕ್ಕು, ರಕ್ಷಣೆಗೆ ದೊಡ್ಡ ಸಂದೇಶ ರವಾನಿಸಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ಪರವಾಗಿ ದಿಟ್ಟ ಹೋರಾಟ ಆರಂಭಿಸಿದ್ದಾರೆ. ದೇಶಾದ್ಯಂತ ಮತ ಅಕ್ರಮ ಬಯಲಿಗೆಳೆಯಲು ಕರ್ನಾಟಕದಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ” ಎಂದು ತಿಳಿಸಿದರು.
“ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐಸಿಸಿ ಮಾನವ ಹಕ್ಕು ವಿಭಾಗದ ಸಭೆಯಲ್ಲಿ ರಾಹುಲ್ ಗಾಂಧಿ ಅವರು, ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಣೆ ಮಾಡಲು, ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಇರುವಂತೆ ಪ್ರತಿ ಕ್ಷೇತ್ರದಲ್ಲಿ ಲೀಗಲ್ ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಅವರ ಸೂಚನೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ” ಎಂದು ಹೇಳಿದರು.
ಮಾಧ್ಯಮ ಪ್ರತಿಕ್ರಿಯೆ:
ಕಾರ್ಯಕ್ರಮಕ್ಕೂ ಮುನ್ನ ಖಾಸಗಿ ಹೊಟೇಲ್ ನಲ್ಲಿ ಸುದ್ದಿ ಸಂಸ್ಧೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕರು. ದೇಶ, ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣಾ ವ್ಯವಸ್ಥೆ, ಮತದಾರರ ರಕ್ಷಣೆಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಅಧ್ಯಯನ ಮಾಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಆಂತರಿಕ ಸಂಶೋಧನಾ ತಂಡವನ್ನು ಹೊಂದಿದೆ. ಅದು ಚುನಾವಣೆ ಅಕ್ರಮಗಳ ಬಗ್ಗೆ ಸಂಶೋಧನೆ ಮುಂದುವರೆಸಿದೆ ಎಂದರು
“ಬಿಜೆಪಿಯವರು ಚಿಲುಮೆ ಸಂಸ್ಥೆ ಮೂಲಕ ತಮ್ಮ 8 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಿಎಲ್ಓ ಗಳಾಗಿ ನೇಮಿಸಿತ್ತು. ಇದರ ವಿರುದ್ಧ ಹೋರಾಟ ಮಾಡಿ ನಾವು ನಿಯಂತ್ರಣ ಮಾಡಿದೆವು. ಚುನಾವಣೆ ಫಲಿತಾಂಶದ ಸಂದರ್ಭದಲ್ಲೇ ದೂರು ನೀಡಬೇಕಿತ್ತು. ಆದರೆ ದೇಶದಲ್ಲಿ ಇದುವರೆಗೂ ಚುನಾವಣಾ ದೂರುಗಳು ಇತ್ಯರ್ಥವಾಗಿಲ್ಲ. ಹೀಗಾಗಿ ನಾವು ಅದನ್ನು ಬಿಟ್ಟಿದ್ದೆವು. ಈಗ ಜನರ ಮುಂದೆ ಈ ಅಕ್ರಮಗಳನ್ನು ಬಹಿರಂಗಪಡಿಸಲು ತೀರ್ಮಾನಿಸಿದ್ದೇವೆ. ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಈ ಅಕ್ರಮಗಳಿಗೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಿದ್ದಾರೆ. ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ತಂದುಕೊಟ್ಟ ಪಕ್ಷದ ಮುಖಂಡರಾಗಿ ಅವರು ಧ್ವನಿ ಎತ್ತುತ್ತಿದ್ದಾರೆ. ನಮ್ಮ ಹಕ್ಕು, ನಮ್ಮ ಪ್ರಜಾಪ್ರಭುತ್ವವನ್ನು ನಾವು ಕಾಪಾಡಬೇಕು” ಎಂದು ತಿಳಿಸಿದರು.
SHOCKING : ರಾಜಸ್ಥಾನದಲ್ಲಿ `ರಾಕ್ಷಸಿ ಕೃತ್ಯ’ : ಬೀದಿ ನಾಯಿಗಳನ್ನು ಬೆನ್ನಟ್ಟಿ ಗುಂಡು ಹಾರಿಸಿ ಬರ್ಬರ ಹತ್ಯೆ.!
BREAKING : 6 ಮತಗಳಲ್ಲಿ 1 ಮತ ಕಳ್ಳತನ ಮಾಡಿದ್ದಾರೆ : ರಾಹುಲ್ ಗಾಂಧಿ ಗಂಭೀರ ಆರೋಪ | WATCH VIDEO