ಬೆಂಗಳೂರು : ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು. ಇದೀಗ ಘಟನೆಗೆ ಸಂಬಂಧಿಸಿದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿಚಾರಣಾ ಆಯೋಗದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ನಿವೃತ್ತ ನ್ಯಾಯಮೂರ್ತಿ ಮೈಖಲ್ ಕುನ್ಹಾ ಅವರ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ರದ್ದುಪಡಿಸುವಂತೆ ಕೋರಿ ಡಿಎನ್ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಸುನಿಲ್ ಮ್ಯಾಥ್ಯೂ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠವು ಸರ್ಕಾರಕ್ಕೆ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಅಡ್ವೋಕೇಟ್ ಜನರಲ್ ಅವರನ್ನು ಉದ್ದೇಶಿಸಿದ್ದ ನ್ಯಾಯಪೀಠ, ನ್ಯಾಯಮೂರ್ತಿ ಕುನ್ಹಾ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದೇ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಈ ಸಂಬಂಧ ಸರ್ಕಾರದಿಂದ ಮಾಹಿತಿ ಪಡೆದು ಪೀಠಕ್ಕೆ ತಿಳಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಆದರೆ, ಈ ಹಂತದಲ್ಲಿ ಅರ್ಜಿದಾರರಿಗೆ ವರದಿ ನೀಡಲಾಗುವುದಿಲ್ಲ ಎಂದು ತಿಳಿಸಿದರು. ಈ ಹೇಳಿಕೆ ಪರಿಗಣಿಸಿದ ನ್ಯಾಯಪೀಠ, ನ್ಯಾ.ಕುನ್ಹಾ ಅವರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಆ.7ಕ್ಕೆ ಮುಂದೂಡಿತು