ದಕ್ಷಿಣಕನ್ನಡ : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎಯ ಅಧಿಕಾರಿಗಳು ಶನಿವಾರ ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 18 ಕಡೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, 11 ಮೊಬೈಲ್ ಫೋನ್ ಗಳು, 13 ಸಿಮ್ ಕಾರ್ಡ್ಗಳು, 8 ಮೆಮೊರಿ ಕಾರ್ಡ್ಗಳು ಹಾಗೂ ಇನ್ನಿತರ ದಾಖ ಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸರು ಆರಂಭದಲ್ಲಿ ನಡೆಸಿದ ತನಿಖಾ ವರದಿಯನ್ನು ಸುಪರ್ದಿಗೆ ಪಡೆದುಕೊಂಡಿದ್ದಾರೆ. ಬಂಧಿತರಾಗಿರುವ 12 ಆರೋಪಿಗಳ ಮನೆ ಸೇರಿದಂತೆ ಒಟ್ಟು 18 ಕಡೆಗಳಲ್ಲಿ ದಾಳಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಠಾಣಾ ವ್ಯಾಪ್ತಿಯಲ್ಲಿ 10 ಕಡೆ ಹಾಗೂ ಸುರತ್ಕಲ್ ನ 4 ಕಡೆ ದಾಳಿ ನಡೆಸಲಾಗಿದೆ. ಘಟನೆ ನಡೆದ ಸಂದರ್ಭ ಮೊಬೈಲ್ನಲ್ಲಿ ಚಿತ್ರೀಕರಣ ನಡೆಸಿದ ಕಿನ್ನಿಪದವುನಲ್ಲಿರುವ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಅಲ್ಲಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಇದೇ ವೇಳೆ, ಮಂಗಳೂರು ನಗರ ಪೊಲೀಸರು ಆರಂಭದಲ್ಲಿ ನಡೆಸಿದ ತನಿಖಾ ವರದಿಯನ್ನು ತಮ್ಮ ಸುಪರ್ದಿಗೆ ಪಡೆದು ಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ 2 ಕಡೆ ದಾಳಿ ನಡೆದಿದೆ. ಕೋಟೆಹೊಳೆ ಹಾಗೂ ರುದ್ರಪಾದಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು 2 ಆರೋಪಿಗಳ ಮನೆಗಳಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ, ಹಾಸನದಲ್ಲಿಯೂ 2 ಕಡೆ ದಾಳಿ ನಡೆದಿದ್ದಾಗಿ ವರದಿಯಾಗಿದೆ.