ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಕೊಪ್ಪಳದಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಶವ ಸುಟ್ಟು ಹಾಕಿದ ಘಟನೆ ನಡೆದಿದೆ.
ಬೂದಗುಂಪ ಗ್ರಾಮದ ದ್ಯಾಮಣ್ಣ ವಜ್ರಬಂಡಿ (38) ಎಂಬ ವ್ಯಕ್ತಿಯನ್ನು ಲವರ್ ಜೊತೆಗೆ ಸೇರಿ ಪತ್ನಿಯೇ ಹತ್ಯೆ ಮಾಡಿ ಶವ ಸುಟ್ಟು ಹಾಕಿದ್ದಾಳೆ. ದ್ಯಾಮಣ್ಣ ಸುಮಾರು ವರ್ಷದ ಹಿಂದೆ ಕಾಮನೂರ ಗ್ರಾಮದ ನೇತ್ರಾವತಿ ಎಂಬಾಕೆಯನ್ನು ಮದುವೆಯಾಗಿದ್ದ. ಆದರೇ ಪತ್ನಿಗೆ ಅದೇ ಗ್ರಾಮದ ಶ್ಯಾಮಣ್ಣ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು.
ಶ್ಯಾಮಣ್ಣ ಗೆ ಕೂಡ ಈ ಹಿಂದೆ ಮದುವೆಯಾಗಿ ಮೂವರು ಮಕ್ಕಳಿದ್ದರು, ಆದರೂ ಕೂಡ ಆರೋಪಿ ನೇತ್ರಾವತಿ ಜೊತೆ ಅಕ್ರಮವಾಗಿ ಸಂಬಂಧ ಇಟ್ಟುಕೊಂಡಿದ್ದ. ಆದರೆ ಈ ವೇಳೆ ಇಬ್ಬರ ಪ್ರೀತಿಗೆ ಪತಿ ಅಡ್ಡಿಯಾಗುತ್ತಾನೆ ಎಂದು ಲವರ್ ಜೊತೆಗೆ ಸೇರಿ ನೇತ್ರಾವತಿ ದ್ಯಾಮಣ್ಣನನ್ನ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಲವರ್ ಶ್ಯಾಮಣ್ಣ ಜೊತೆಗೆ ಸೇರಿ ನೇತ್ರಾವತಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಶವ ಸುಟ್ಟು ಹಾಕಿದ್ದಳು. ತನಿಖೆ ಆರಂಭಿಸಿದ ಪೊಲೀಸರು ನೇತ್ರಾವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಪತ್ನಿ ನೇತ್ರಾವತಿ ಹಾಗೂ ಆಕೆಯ ಪ್ರಿಯಕರ ಶ್ಯಾಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.