ಬೆಂಗಳೂರು : ಬೆಂಗಳೂರು ಅಪಾರ್ಟ್‌ಮೆಂಟ್ ಗೋಡೆ ಮೇಲೆ ಬಾಂಬ್ ಬ್ಲಾಸ್ಟ್ ಮಾಡೋದಾಗಿ ಬೆದರಿಕೆ ಹಾಕಲಾಗಿದ್ದು ಪೊಲೀಸರು ತನಿಖೆ ನಡೆಸಿದಾಗ 13 ವರ್ಷದ ಮೂವರು ಬಾಲಕಿಯರು ಗೋಡೆಯ ಮೇಲೆ ಈ ಒಂದು ಬರಹ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಕಳೆದ ಕೆಲವು ದಿನಗಳಿಂದ ಬೆಂಗಳೂರು ಖಾಸಗಿ ಶಾಲೆಗಳಿಗೆ ಬೆದರಿಕೆಯ ಇ-ಮೇಲ್ ಸಂದೇಶಗಳು ಬರುತ್ತಿದ್ದವು ಆದರೆ ಇದೀಗ ನಗರದ ಕೊಡಿಗೇಹಳ್ಳಿಯ ಅಲ್ಫೈನ್ ಪಿರಮಿಡ್ ಅಪಾರ್ಟ್ಮೆಂಟ್‌ನಲ್ಲಿ ಗೋಡೆಯ ಮೇಲೆ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿರುವ ದುಷ್ಕರ್ಮಿಯ ಬರಹ ಪತ್ತೆಯಾಗಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಮೂವರು ಅಪ್ರಾಪ್ತ ಬಾಲಕಿಯರು ಈ ಬರಹ ಬರೆದಿರುವುದು ಬೆಳಕಿಗೆ ಬಂದಿದೆ.
ಸುಮಾರು 200 ರಿಂದ 300 ಮನೆಗಳನ್ನೊಳಗೊಂಡಿರುವ ಈ ಅಪಾರ್ಟ್ಮೆಂಟ್‌ನಲ್ಲಿ, ಗೋಡೆಯ ಮೇಲಿನ ಬರಹದಲ್ಲಿ ‘I am going to blast India from Pakistan’ ನಾನು ಪಾಕಿಸ್ತಾನದಿಂದಲೇ ಇಡೀ ಭಾರತವನ್ನು ಬ್ಲಾಸ್ಟ್ ಮಾಡುತ್ತೇನೆ’ ಎಂದು ಬರೆದು ಬೆದರಿಕೆ ಹಾಕಿರುವುದು ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ. ಇನ್ನು ಅಪಾರ್ಟ್‌ಮೆಂಟ್ ಗೋಡೆಯ ಮೇಲಿನ ಬೆದರಿಕೆ ಬರಹ ಕಂಡ ನಿವಾಸಿಗಳು ತಕ್ಷಣವೇ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪಾರ್ಟ್ಮೆಂಟ್‌ನ ಎಲ್ಲಾ ಬ್ಲಾಕ್‌ಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ.ಪ್ರಸ್ತುತ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಈ ಬರಹ ಯಾರಿಂದ ಬರೆದಿದ್ದಾರೆ ಎನ್ನುವುದನ್ನು ಸಿಸಿಟಿವಿ ಫುಟೇಜ್ ಆಧರಿಸಿ ಪತ್ತೆಹಚ್ಚುವ ಕಾರ್ಯ ನಡೆಸಿದ್ದಾರೆ. ಇದಾದ ನಂತರ ಮೂವರು ಅಪ್ರಾಪ್ತ ಬಾಲಕಿಯರು ಗೋಡೆಯ ಮೇಲೆ ತಮಾಷೆಗಾಗಿ ಈ ರೀತಿಯ ಭರಹವನ್ನು ಬರೆದಿದ್ದಾರೆ ಎಂಬುದು ತಿಳಿದುಬಂದಿದೆ.
ಇನ್ನು ಈ ಘಟನೆ ಸಂಬಂಧ ಕೋಡಿಗೇಹಳ್ಳಿ ಠಾಣೆ ಪೊಲೀಸರು ಎನ್ ಸಿ ಆರ್ ದಾಖಲಿಸಿಕೊಂಡು ಮಕ್ಕಳನ್ನು ವಶಕ್ಕೆ ಪಡದು ತನಿಖೆ ಮಾಡುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿದ ವೇಳೆ 12ರಿಂದ 13 ವರ್ಷದ ಮೂವರು ಬಾಲಕಿಯರು ಸೇರಿಕೊಂಡು ಈ ರೀತಿಯ ಬರಹವನ್ನು ಬರೆದಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.