ಕಲಬುರಗಿ : ಮಹಾರಾಷ್ಟ್ರದಲ್ಲಿ ಡ್ರಗ್ಸ್ ಸಾಗಾಣಿಕೆ ಕೇಸ್‌ನಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಉಚ್ಛಾಟಿತ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿಗೆ ಜಾಮೀನು ದೊರಕಿದೆ. ಥಾಣೆಯ ಕಲ್ಯಾಣದಲ್ಲಿರುವ ಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿಂದ ಬಿಡುಗಡೆಯಾಗಿ ಕಲಬುರಗಿಗೆ ಆಗಮಿಸಿದ ಕಣ್ಣಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಯಾವುದೇ ತಪ್ಪು ಮಾಡಿಲ್ಲ. ಬೇಕಾದರೆ ಪ್ರಕರಣ ಕುರಿತು ಸಿಬಿಐನಿಂದ ತನಿಖೆ ಮಾಡಿಸಲಿ ಎಂದರು. ಕಲಬುರಗಿಯ ಸಯ್ಯದ್ ಇರ್ಫಾನ್ ಜೊತೆ ಹಾಜಿನ ಲಾಂಗ್ ದರ್ಗಾ ಮತ್ತು ಸಿದ್ದಿವಿನಾಯಕ ದೇಗುಲಕ್ಕೆ ಹೋಗಿದ್ದೆ. ಇರ್ಫಾನ್‌ನ ಸಂಬಂಧಿ ಮುಂಬೈನ ತೌಸಿಫ್ ಎಂಬಾತ ಸಂಬಂಧಿ ಲಾಡ್ಜ್‌ಗೆ ಕರೆದ. ಹೋದ ಕೆಲವೇ ನಿಮಿಷಗಳಲ್ಲಿ ಪೊಲೀಸರು ದಾಳಿ ಮಾಡಿ ಅಚ್ಚರಿ ಮೂಡಿಸಿದರು.
ಯಾವುದೋ ಪ್ರಕರಣದಲ್ಲಿ 3 ತಿಂಗಳಿಂದಲೂ ತೌಸಿಫ್ ನನ್ನು ಪೊಲೀಸರು ಹುಡುಕುತ್ತಿದ್ದರಂತೆ. ಆತನನ್ನು ಅರೆಸ್ಟ್ ಮಾಡಲು ಬಂದವರ ಕೈಗೆ ಸಿಕ್ಕಿ ಹಾಕಿ ಕೊಂಡೆವು. ನನ್ನ ಬಳಿಯಾಗಲಿ, ತೌಸಿಫ್ ಬಳಿಯಾಗಲಿ ನಿಷೇಧಿತ ಸಿರಪ್ ಬಾಟಲಿ ಸಿಕ್ಕಿಲ್ಲ. ಪೊಲೀಸರೇ ತಮ್ಮ ಕಾರ್‌ನಿಂದ 120 ಎನ್ ರೆಕ್ಸ್ ಸಿರಪ್ ಬಾಟಲಿಗಳನ್ನು ತೌಸಿಫ್‌ನ ಬೈಕ್ ಮೇಲೆ ಇಟ್ಟು ಫೋಟೋ ತೆಗೆದುಕೊಂಡು ನಮ್ಮನ್ನು ಕೇಸ್‌ನಲ್ಲಿ ಸಿಲುಕಿಸಿದ್ದಾರೆ ಎಂದು ಕಣ್ಣಿ ಹೇಳಿದರು.