ಚೆನ್ನೈ: ತನ್ನ ಗಮನಕ್ಕೆ ಬಂದ ಎಲ್ಲವನ್ನೂ ತನಿಖೆ ಮಾಡಲು ಜಾರಿ ನಿರ್ದೇಶನಾಲಯವು (ಇ.ಡಿ.) ‘ಸೂಪರ್‌ಪೊಲೀಸ್’ ಅಲ್ಲ, ಹೋಗಿ ದಾಳಿ ನಡೆಸಲು ‘ಡ್ರೋನ್’ ಕೂಡ ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತನ್ನ 901 ಕೋಟಿ ರು.ಗಳ ಸ್ಥಿರ ಠೇವಣಿಯನ್ನು ಇ.ಡಿ. ಜಪ್ತಿ ಮಾಡಿದ್ದನ್ನು ಪ್ರಶ್ನಿಸಿ ಚೆನ್ನೈನ ಆರ್‌ಕೆಎಂ ಪವರ್‌ಜೆನ್ ಪ್ರೈ.ಲಿ. ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಇ.ಡಿ. ಗುರುತಿಸಿದ ವಿಚಾರದಲ್ಲಿ ತನಿಖಾ ಸಂಸ್ಥೆಗಳಿಗೆ ಯಾವುದೇ ಸಮಸ್ಯೆ ಕಂಡುಬರದಿದ್ದರೆ, ಇ.ಡಿ. ಸ್ವಯಂಪ್ರೇರಿತ ವಾಗಿ ತನ್ನ ಅಧಿಕಾರವನ್ನು ಕಲ್ಪಿಸಿಕೊಂಡು ತನಿಖೆ ಮುಂದುವರಿಸುವಂತಿರಲಿಲ್ಲ. ಕಂಡಿದ್ದೆಲ್ಲವನ್ನೂ ತನಿಖೆ ಮಾಡಲು ಇ.ಡಿ. ಸೂಪರ್ ಪೊಲೀಸೂ ಅಲ್ಲ, ಡ್ರೋನು ಅಲ್ಲ ಎಂದು ಅಭಿಪ್ರಾಯಪಟ್ಟಿದೆ.
ಛತ್ತೀಸಗಢದಲ್ಲಿ ವಿದ್ಯುತ್ ಸ್ಥಾವರವೊಂದಕ್ಕೆ ಕಲ್ಲಿದ್ದಲು ಬ್ಲಾಕ್ ಪೂರೈಕೆಯಲ್ಲಿ ಕಂಪನಿಯಿಂದ ಅಕ್ರಮ ನಡೆದಿಲ್ಲ ಎಂದು ತನಿಖಾ ಸಂಸ್ಥೆ ವರದಿ ಸಲ್ಲಿಸಿದ ನಂತರವೂ ಇ.ಡಿ. ಕಂಪನಿಯ 901 ಕೋಟಿ ರು. ಸ್ಥಿರ ಠೇವಣಿ ಹಣವನ್ನು ಜಪ್ತಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಸಿದಂತೆ ಹೈಕೋರ್ಟ್ ಇದೀಗ ಇಡಿ ಸಂಸ್ಥೆಗೆ ತರಾಟೆ ತೆಗೆದುಕೊಂಡಿದೆ.