ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಈ ಭಾಗದಲ್ಲಿ ಅನೇಕ ಕಡೆ ಬಸ್ ಸಮಸ್ಯೆ ಹೆಚ್ಚಾಗಿತ್ತು. ಅದರಲ್ಲೂ ಉಚಿತ ಬಸ್ ಸೇವೆಯ ನಂತರ ಬಹಳಷ್ಟು ಸಮಸ್ಯೆ ಆಗಿತ್ತು. ಇದೀಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಗುಡ್ ನ್ಯೂಸ್ ನೀಡಿದ್ದು, 200 ಎಲೆಕ್ಟಿಕಲ್ ಬಸ್‌ಗಳನ್ನ ಆರಂಭಿಸಲು ನಿರ್ಧಾರ ಮಾಡಿದೆ.
ಹೌದು ಕೇಂದ್ರ ಸರ್ಕಾರದ ಪಿಎಎಂ- ಇ ಸೇವಾ ಬಸ್ ಯೋಜನೆ ಅಡಿಯಲ್ಲಿ ಈ ಬಸ್‌ಗಳನ್ನ ಆರಂಭಮಾಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಹಲವು ನಗರಗಳಿಗೆ ಇವಿ ಬಸ್‌ಗಳನ್ನು ಮಂಜೂರು ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾಡಿರುವ 200 ಇ ಬಸ್‌ಗಳು ನವೆಂಬರ್‌ನಿಂದ ರಸ್ತೆಗೆ ಇಳಿಯಲಿದೆ ಎನ್ನಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಈ ಬಸ್‌ಗಳು ಕೇವಲ ನಗರ ಪ್ರದೇಶಕ್ಕೆ ಮಾತ್ರವಾಗಿದ್ದು, ಇನ್ನು ಮುಂದೆ ಜನರಿಗೆ ಬಸ್ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎನ್ನಲಾಗುತ್ತಿದೆ.
ಇನ್ನು ಕೆಲ ತಿಂಗಳ ಹಿಂದೆ ಶಿರಸಿಯಲ್ಲಿ ರೂ.6.78 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ಸೆಂಟ್ರಲ್ ಬಸ್ಟಾಂಡ್ ಉದ್ಘಾಟಿಸಿ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹೊಸದಾಗಿ ಸರ್ಕಾರದಿಂದ ಏಳನೂರು ಬಸ್‌ಗಳನ್ನು ಒದಗಿಸಿದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 6 ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗಿನ ಬಜೆಟ್‌ನಲ್ಲಿ ಈಗಾಗಲೇ 4 ಸಾರಿಗೆ ನಿಗಮಗಳಿಗೆ ಹೊಸದಾಗಿ ಎರಡು ಸಾವಿರ ಬಸ್ ಖರೀದಿಸಲು ಅನುಮತಿ ನೀಡಿದ್ದಾರೆ ಎಂದಿದ್ದ ಸಚಿವರು, 300 ಬಸ್‌ಗಳನ್ನು ಮೊದಲ ಹಂತದಲ್ಲಿ ಖರೀದಿ ಮಾಡುತ್ತೇವೆ. ಈ ಹಂತದ ಖರೀದಿಗಾಗಿ ರೂ.134 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು. ನಾಲ್ಕು ತಿಂಗಳಲ್ಲಿ ಹೆಚ್ಚುವರಿ ಬಸ್‌ಗಳನ ಖರೀದಿ ಪ್ರಕ್ರಿಯೆ ಮುಗಿಯಲಿದೆ ಎಂದು ಭರವಸೆ ನೀಡಿದ್ದರು.