ಬೆಂಗಳೂರು : ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಬಹುಭಾಷಾ ಹಿರಿಯ ನಟಿ ಬಿ ಸರೋಜಾ ದೇವಿ ಅವರು ನಿನ್ನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಸರೋಜಾ ದೇವಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಇದೀಗ ಬಿ.ಸರೋಜಾದೇವಿಯವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸರೋಜಾ ದೇವಿಯವರ ಅಂತಿಮ ದರ್ಶನ ಪಡೆಯದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಬಹಳ ಚಿಕ್ಕ ವಯಸ್ಸಿನಲ್ಲಿ ಸರೋಜಾ ದೇವಿಯವರು ಸಿನಿಮಾರಂಗ ಪ್ರವೇಶಿಸಿದ್ದರು. ಕನ್ನಡ ಚಲನಚಿತ್ರರಂಗ ಬೆಳೆಯಲು ಸರೋಜಾ ದೇವಿ ಅವರ ಕೊಡುಗೆ ಅಪಾರ. ಹಿರಿಯ ನಟಿ ಬಿ ಸರೋಜಾ ದೇವಿ ನಿಧನದಿಂದ ಅಪಾರ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ನಟಿ ಸರೋಜಾದೇವಿ ಅವರಿಗೆ ಚಿರಶಾಂತಿ ಸಿಗಲಿ ನಾನು ಈ ಹಿಂದೆ ಹಲವು ಸಲ ಸರೋಜಾ ದೇವಿ ಅವರನ್ನು ಭೇಟಿಯಾಗಿದ್ದೆ. ಎಲ್ಲರ ಜೊತೆಗೂ ಬಹಳ ಆತ್ಮೀಯವಾಗಿ ಪ್ರೀತಿಯಿಂದ ಮಾತನಾಡುತ್ತಾರೆ ಹಲವು ಭಾಷೆಗಳಲ್ಲಿ ಹೆಸರಾಂತ ನಟರ ಜೊತೆಗೆ ನಟಿಸಿದ್ದರು ಎಂದರು.
ಮಲ್ಲೇಶ್ವರಂ ನಲ್ಲಿರುವ ನಿವಾಸದ ರಸ್ತೆಯ ಹೆಸರಿಡುವ ಬಗ್ಗೆ ಚರ್ಚಿಸುತ್ತೇನೆ. ಮಲ್ಲೇಶ್ವರಂ ರಸ್ತೆಗೆ ಸರೋಜಾದೇವಿ ಹೆಸರಿಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಅಂತಿಮ ದರ್ಶನದ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಮಲ್ಲೇಶ್ವರಂ 11ನೇ ಕ್ರಾಸಿಗೆ ಬಿ ಸರೋಜಾ ದೇವಿ ಅವರ ಹೆಸರಿಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಈ ಕುರಿತು ಬಿಬಿಎಂಪಿಯೊಂದಿಗೆ ಚರ್ಚೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.