ನವದೆಹಲಿ: ಸಿಖ್ ಧರ್ಮದ ಅನುಯಾಯಿಗಳ ಪವಿತ್ರ ದೇವಾಲಯವಾದ ಅಮೃತಸರದ ಗೋಲ್ಡನ್ ಟೆಂಪಲ್ಗೆ ಬಾಂಬ್ ಬೆದರಿಕೆ ಬಂದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ರವಾನಿಸಲಾಗಿದೆ.ದರ್ಬಾರ್ ಸಾಹಿಬ್ ಎಂದೂ ಕರೆಯಲ್ಪಡುವ ಗೋಲ್ಡನ್ ಟೆಂಪಲ್ನ ಲಂಗರ್ ಹಾಲ್ (ಸಮುದಾಯ ಅಡುಗೆಮನೆ ಸಭಾಂಗಣ) ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಇ-ಮೇಲ್ ಸ್ವೀಕರಿಸಿದ ನಂತರ ಸಿಖ್ಖರ ಅತ್ಯುನ್ನತ ಧಾರ್ಮಿಕ ಆಡಳಿತ ಮಂಡಳಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ದೂರು ದಾಖಲಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ನಿಗಾ ಇಟ್ಟಿದ್ದಾರೆ ಎಂದು ಎಸ್ಜಿಪಿಸಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಹೇಳಿದ್ದಾರೆ. “ಈ ಸಮಯದಲ್ಲಿ ಈ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ” ಎಂದು ಧಾಮಿ ಹೇಳಿದರು.
ಎಸ್ಜಿಪಿಸಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಮೃತಸರ ಪೊಲೀಸ್ ಆಯುಕ್ತ ಗುರ್ಪ್ರೀತ್ ಸಿಂಗ್ ಭುಲ್ಲರ್ ಖಚಿತಪಡಿಸಿದ್ದಾರೆ.
ಅಲ್ಲದೆ, ಪಂಜಾಬ್ ಪೊಲೀಸರ ಸೈಬರ್ ಅಪರಾಧ ವಿಭಾಗವು ಬೆದರಿಕೆ ಮೇಲ್ನ ಮೂಲವನ್ನು ತಲುಪಲು ಸಕ್ರಿಯವಾಗಿ ಪ್ರಯತ್ನಿಸುತ್ತಿದೆ.