ಕಲಬುರ್ಗಿ : ಕಳೆದ ಎರಡು ದಿನಗಳ ಹಿಂದೆ ಕಲ್ಬುರ್ಗಿ ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಹಾಡಹಗಲೇ ಚಿನ್ನದ ಅಂಗಡಿಗೆ ನುಗ್ಗಿ ಮಾಲೀಕನಿಗೆ ಗನ್ ತೋರಿಸಿ 82 ಲಕ್ಷಕ್ಕೂ ಅಧಿಕ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಲ್ಬುರ್ಗಿ ಪೊಲೀಸ್ರು ಇಬ್ಬರನ್ನು ಅರೆಸ್ಟ್ ಮಾಡಿದ್ದು, ಉಳಿದವರನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಇಂಥದ್ದೇ ಚಿನ್ನದಂಗಡಿಯಲ್ಲಿ ದರೋಡೆ ನಡೆಸುವಂತೆ ಸುಪಾರಿ ನೀಡಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು, ಇದೀಗ ಮುಂಬೈ ನಗರದಲ್ಲಿ ಅವಿತು ಕುಳಿತಿರುವ ದರೋಡೆಕೋರರ ಸುಳಿವು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನಾಭರಣ ಅಂಗಡಿ ಮಾಲೀಕನ ಹಣೆಗೆ ಗನ್ ಹಿಡಿದು ಬೆದರಿಕೆ ಹಾಕಿ, ಆತನ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ್ದ ದರೋಡೆಕೋರರ ಬೆನ್ನು ಹತ್ತಿರುವ ಕಲಬುರಗಿ ಪೊಲೀಸರು ಈಗಾಗಲೇ ಮುಂಬೈ ತಲುಪಿದ್ದು, ಕಳ್ಳರು ಎಲ್ಲಿ ಅವಿತು ಕುಳಿತಿದ್ದಾರೆ ಎಂಬ ಸುಳಿವು ಸಹ ಪೊಲೀಸರಿಗೆ ಲಭಿಸಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ದರೋಡೆಕೋರರ ಜೊತೆ ಸಂಪರ್ಕದಲ್ಲಿದ್ದ ಹೈದರಾಬಾದ್ ಮೂಲದ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಈ ಇಬ್ಬರೂ ದರೋಡೆಕೋರರು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಹೊಣೆಗಾರಿಕೆ ಹೊತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಥದ್ದೆ ಅಂಗಡಿ ದರೋಡೆ ಮಾಡಲು ಸುಪಾರಿ!
ಕಲಬುರಗಿಯ ಸರಾಫ್ ಬಜಾರ್ ಪ್ರದೇಶದಲ್ಲಿರುವ ಇಂಥದ್ದೇ ಚಿನ್ನಾಭರಣದ ಅಂಗಡಿಗೆ ನುಗ್ಗಿ, ದರೋಡೆ ಮಾಡುವಂತೆ ಸುಪಾರಿ ನೀಡಿರುವ ಕುತೂಹಲಕಾರಿ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹೀಗೆ ಸುಪಾರಿ ನೀಡಿರುವ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು ಆತನ ಬಂಧನಕ್ಕೆ ಯೋಜನೆ ರೂಪಿಸುವಷ್ಟರಲ್ಲಿ ಆತ ತೆಲಂಗಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ಕಾಲ್ಕಿತ್ತಿದ್ದಾನೆ ಎಂಬ ಅಂಶ ಸದ್ಯ ಬೆಳಕಿಗೆ ಬಂದಿದೆ. ದರೋಡೆಕೋರರ ಬಳಿ ಗನ್ ಇರುವ ಕಾರಣಕ್ಕಾಗಿ ಪಕ್ಕಾ ಯೋಜನೆ ರೂಪಿಸಿಯೇ ದರೋಡೆಕೋರರನ್ನು ಹೆಡೆಮುರಿ ಕಟ್ಟಿ ಕಲಬುರಗಿಗೆ ತರಲು ಪೊಲೀಸರು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.