ವಿಜಯನಗರ : ವಿಜಯನಗರದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಪ್ರೀತಿಸಿದ ಯುವತಿಯ ಮನೆಯವರೇ, ಜೀವ ಬೆದರಿಕೆ ಹಾಕಿದ್ದರಿಂದ ಹೆದರಿಕೊಂಡು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ಉದ್ಧಟ್ಟಿ ದೊಡ್ಡತಾಂಡದಲ್ಲಿ ನಡೆದಿದೆ.
4 ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯ ಕುಟುಂಬಸ್ಥರು ಕೊಲೆ ಬೆದರಿಕೆ ಹಾಕಿದ್ದಕ್ಕೆ ನಿನ್ನೆ ಶಶಿಕುಮಾರ್ ನಾಯ್ಕ್ (25) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅದೇ ಗ್ರಾಮದ ಯುವತಿಯನ್ನು ಶಶಿಕುಮಾರ್ ಕಳೆದ 4 ವರ್ಷದಿಂದ ಪ್ರೀತಿಸುತ್ತಿದ್ದ. ಯುವತಿ ಮನೆಯವರು ಮದುವೆಗೆ ನಿರಾಕರಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದರಿಂದ ಬೇಸತ್ತು ಆತ ನೇಣಿಗೆ ಶರಣಾಗಿದ್ದಾನೆ. ಯುವಕನ ಸಾವಿಗೆ ಪ್ರಿಯತಮೆಯ ಕುಟುಂಬಸ್ಥರ ಬೆದರಿಕೆಯೇ ಕಾರಣ ಎಂದು ಆರೋಪಿಸಿ ಹರಪ್ಪನಹಳ್ಳಿ ಪೊಲೀಸ್ ಠಾಣೆಗೆ ಶಶಿಕುಮಾರ್ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.