ಬೆಂಗಳೂರು : ಹಾಸನದಲ್ಲಿ ಸರಣಿ ಹೃದಯಘಾತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಾಂತ್ರಿಕ ಸಲಹಾ ಸಮಿತಿಯನ್ನು ನೇಮಕ ಮಾಡಿತ್ತು. ನಿನ್ನೆ ಈ ಒಂದು ಸಮಿತಿ ರಜೆ ಸರ್ಕಾರಕ್ಕೆ ಸಂಪೂರ್ಣ ವರದಿ ಸಲಿಸಿದ್ದು ವರದಿಯಲ್ಲಿ ಚಾಲಕರಿಗೆ ಅತಿ ಹೆಚ್ಚು ಹೃದಯಘಾತ ಆಗಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಒಟ್ಟು 8 ಲಕ್ಷ ಚಾಲಕರಿಗೆ ಹೆಲ್ತ್ ಕ್ಯಾಂಪ್ ಆಯೋಜನೆ ಮಾಡಿ ಆರೋಗ್ಯ ತಪಾಸಣೆ ಮಾಡಲು ನಿರ್ಧಾರ ಕೈಗೊಂಡಿದೆ.
ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹೃದಯಾಘಾತದ ವರದಿಯನ್ನು ಬುಧವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಹಿರಂಗಪಡಿಸಿದ್ದಾರೆ. ಈ ವೇಳೆ ವಾಹನ ಚಾಲಕರ ಬಗ್ಗೆ ಆಘಾತಕಾರಿ ಅಂಶವೊಂದನ್ನು ತಿಳಿಸಿದ್ದು, ಹೃದಯಾಘಾತದಿಂದ ಮೃತಪಟ್ಟವರ ಪೈಕಿ ಶೇ.30ರಷ್ಟು ಮಂದಿ ಅಂದರೆ ಆರು ಜನ ಆಟೋ ಹಾಗೂ ಕ್ಯಾಬ್ ಚಾಲಕರು ಎಂದಿದ್ದಾರೆ. ಪ್ರಮುಖವಾಗಿ ವಾಯುಮಾಲಿನ್ಯ, ಹೊರಗಿನ ತಿಂಡಿ, ಕುಳಿತಲ್ಲೇ ಕುಳಿತಿರುವುದು ಮೊದಲಾದ ಕಾರಣಗಳಿಂದ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂಬುವುದನ್ನು ತಜ್ಞರ ಬಹಿರಂಗಪಡಿಸಿದ್ದಾರೆ.
ಆರೋಗ್ಯ ಸಚಿವರ ಮಾಹಿತಿಯಿಂದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು ಬೆಚ್ಚಿಬಿದ್ದಿದ್ದಾರೆ. ಇಡೀ ರಾಜ್ಯದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಆಟೋ, ಕ್ಯಾಬ್ ಡ್ರೈವರ್‌ಗಳಿದ್ದು, ಬೆಂಗಳೂರುವೊಂದರಲ್ಲೇ ನಾಲ್ಕು ಲಕ್ಷ ಜನ ಆಟೋ, ಟ್ಯಾಕ್ಸಿ, ಕ್ಯಾಬ್ ಡ್ರೈವರ್‌ಗಳಿದ್ದಾರೆ. ಈ ಚಾಲಕರಿಗೆ ಸರ್ಕಾರ ಸಂಘ-ಸಂಸ್ಥೆಗಳ ಜೊತೆ ಮಾತನಾಡಿ ತಪಾಸಣೆ ಮಾಡುತ್ತೇವೆ ಎಂದಿದೆ. ಜೊತೆಗೆ ಆಟೋ ಅಸೋಸಿಯೇಷನ್ ಸಹ ಖಾಸಗಿ ಆಸ್ಪತ್ರೆಗಳ ಜೊತೆ ಮಾತನಾಡಿ ಪ್ರತಿ ತಿಂಗಳು ಹೆಲ್ತ್ ಕ್ಯಾಂಪ್ ಆಯೋಜಿಸಲು ಮುಂದಾಗಿದೆ.