ಮಂಗಳೂರು: ‘ಡಿಜಿಟಲ್ ಅರೆಸ್ಟ್’ ನೆಪದಲ್ಲಿ ವೃದ್ಧ ಮಹಿಳೆಯೊಬ್ಬರಿಂದ ಬರೋಬ್ಬರಿ 3.16 ಕೋಟಿ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಸೆನ್ ಅಪರಾಧ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ವಂಚನೆ ಪ್ರಮಾಣವು ₹ 3 ಕೋಟಿ ಮೀರಿರುವುದರಿಂದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಜೂನ್ 6ರಂದು ಕರೆ ಮಾಡಿದ್ದ ವ್ಯಕ್ತಿಯು ತನ್ನನ್ನು ಮುಂಬೈನ ಪೊಲೀಸ್ ಇನ್ಸ್ಪೆಕ್ಟರ್ ಅನು ಶರ್ಮಾ ಎಂದು ಪರಿಚಯಿಸಿಕೊಂಡ. ನ್ಯಾಷನಲ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ.
‘ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಹಣ ಕಟ್ಟಬೇಕು. ಅದನ್ನು ಮರಳಿಸುತ್ತೇವೆ. ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಸೂಚಿಸಿದ್ದರು. ಅವರ ಸೂಚನೆ ಪ್ರಕಾರ ಜೂನ್ 10ರಿಂದ 27ರ ವರೆಗೆ ಹಂತ ಹಂತವಾಗಿ ₹ 3,16,52,142 ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಬಳಿಕ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಆತಂಕದಿಂದ ಮಕ್ಕಳಿಗೆ ವಿಷಯವನ್ನು ತಿಳಿಸಿದಾಗ, ನಾನು ವಂಚನೆಗೆ ಒಳಗಾಗಿದ್ದು ಗೊತ್ತಾಯಿತು ಎಂದು ನಿವೃತ್ತ ಉದ್ಯೋಗಿಯಾಗಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಜಿಟಲ್ ಅರೆಸ್ಟ್ ಹೇಗೆ ಸಂಭವಿಸುತ್ತದೆ?
• ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ನಲ್ಲಿ ಕಾನೂನು ಬಾಹಿರ ವಸ್ತುಗಳು ಕಂಡುಬಂದಿದೆ ಅಥವಾ ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ ಎಂದು ಆರೋಪಿಸಿ ವಂಚಕರು ನಿಮ್ಮನ್ನು ಮೋಸಗೊಳಿಸಲು ಫೋನ್ ಕರೆಗಳನ್ನು ಮಾಡುತ್ತಾರೆ.
• ಪೊಲೀಸ್ ಅಧಿಕಾರಿಗಳಂತೆ ವೇಷ ಧರಿಸಿ, ನಿಮ್ಮನ್ನು ವಿಡಿಯೋ ಕಾಲ್ನಲ್ಲಿಯೇ ಇರುವಂತೆ ಒತ್ತಾಯಿಸುತ್ತಾರೆ.
• ನಿಮ್ಮನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಾರೆ.
• ವಂಚಕರು ಆಂಗ್ಲಭಾಷೆಯಲ್ಲಿ ಸಂವಹಿಸಿ ಅಧಿಕಾರಿಗಳಂತೆಯೇ ಸೌಜನ್ಯದಿಂದ ಮಾತನಾಡುತ್ತಾರೆ.
• ವಿಡಿಯೋ ಕರೆ ಮಾಡಿ ನಕಲಿ ಗುರುತಿನ ಚೀಟಿಗಳನ್ನು ತೋರಿಸಿ ಭಯಪಡಿಸುತ್ತಾರೆ.
• ಅಪರಿಚಿತ ಕರೆಗಳನ್ನು ಸ್ವೀಕರಿಸಬೇಡಿ. ಕರೆ ಬಂದ ನಂಬರ್ ಅನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡಿ.
• ಹಣ ವರ್ಗಾವಣೆ ವೇಳೆ ಎಚ್ಚರದಿಂದಿರಿ, ಸೈಬರ್ ರಕ್ಷಣಾ ಕ್ರಮ ಅನುಸರಿಸಿ
• ನಿಮ್ಮ ವೈಯಕ್ತಿಕ ಬ್ಯಾಂಕ್ ಮಾಹಿತಿಯನ್ನು ನೀಡಬೇಡಿ.
• ನೈಜತೆ ಪರಿಶೀಲಿಸಲು ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ.
• ಹಿಂಭಾಗದಲ್ಲಿ ಸರ್ಕಾರಿ ತನಿಖಾ ಸಂಸ್ಥೆ, ಸೈಬರ್ ಕ್ರೈಂ, ಪೊಲೀಸ್ ಇಲಾಖೆಯ ಲೋಗೋ ಬಳಸುತ್ತಾರೆ.
• ನ್ಯಾಯಾಲಯ ಕೊಠಡಿ, ಪೊಲೀಸ್ ಠಾಣೆಯ ವಾತಾವರಣವನ್ನು ಸೃಷ್ಟಿಸುತ್ತಾರೆ.
• ಹಿರಿಯ ನಾಗರಿಕರು, ನಿವೃತ್ತರು, ಉನ್ನತ ಶಿಕ್ಷಣ ಪಡೆದವರನ್ನು ಗುರಿಯಾಗಿಸಲಾಗುತ್ತದೆ.
• ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅದಕ್ಕೆ ಪೂರಕ ದಾಖಲೆಗಳನ್ನು ತೋರಿಸುತ್ತಾರೆ. ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಾರೆ.
• ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗೃತರಾಗಿರಿ.
• ಯಾವುದೇ ಕಾರಣಕ್ಕೂ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ವಿಡಿಯೋ ಕರೆ ಮಾಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ.
• ಯಾರಾದರೂ ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ ಮಾಡಿದ್ದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.