ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಿಬಿಎಸ್ಇ ಮಾದರಿ ಅಳವಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಸ್ತಾಪನೆ ಸಲ್ಲಿಸಿದ್ದು, ಇನ್ಮುಂದೆ ವಿದ್ಯಾರ್ಥಿಗಳು ಕನಿಷ್ಠ 33 ಅಂಕ ಪಡೆದವರನ್ನೂ ತೇರ್ಗಡೆ ಮಾಡಲಾಗುತ್ತದೆ.
ಹೌದು, ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮಕ್ಕಳು ಇನ್ನು ಮುಂದೆ ಸಿಬಿಎಸ್ಇ ಮಾದರಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಸಿಬಿಎಸ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕ ಸೇರಿ ಒಟ್ಟು ಶೇಕಡ 33 ಅಂಕ ಪಡೆದರೂ ಪಾಸ್ ಆಗುತ್ತಾರೆ. ಪ್ರತಿ ವಿಷಯಕ್ಕೆ 20 ಆಂತರಿಕ ಅಂಕಗಳು ನಿಗದಿಪಡಿಸಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಎರಡೂ ಸೇರಿ 100 ಅಂಕಗಳಿಗೆ ಕನಿಷ್ಠ 33 ಅಂಕ ಪಡೆದವರು ಪಾಸ್ ಆಗುತ್ತಾರೆ. ಇದೇ ಮಾದರಿಯನ್ನು ರಾಜ್ಯ ಪಠ್ಯಕ್ರಮದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಳವಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷಾ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿ ಪಾಸಾಗಲು ಶೇಕಡ 35 ರಷ್ಟು ಅಂಕ ಪಡೆಯಬೇಕಿದೆ. ಸಿಬಿಎಸ್ಇ ಮಾದರಿ ಅಳವಡಿಸಿಕೊಂಡರೆ 33 ಅಂಕ ಪಡೆದರೂ ಪಾಸ್ ಆಗುತ್ತಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ ಪ್ರಥಮ ಭಾಷೆಯನ್ನು 125 ಅಂಕಗಳಿಗೆ ನಡೆಸಲಾಗುವುದು. ಪ್ರಥಮ ಭಾಷೆಗೆ 25 ಆಂತರಿಕ ಅಂಕ ಇದೆ. ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಯಾಗಿವೆ.