ಬೆಂಗಳೂರು: 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿನ ಕಂಡಿಕೆ-106ರ ಘೋಷಣೆಯಂತೆ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರಸ್ತುತ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ/ಬಾಳೆಹಣ್ಣನ್ನು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ವಾರದಲ್ಲಿ ಆರು ದಿನಕ್ಕೆ ವಿಸ್ತರಿಸಲಾಗಿದ್ದು ಈ ಯೋಜನೆಯನ್ನು 2025-26ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
1-10 ನೇ ತರಗತಿ ವರೆಗೂ ವಾರದ 6 ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಸರ್ಕಾರ ಘೋಷಣೆ ಮಾಡಿದೆ. ಆದರೆ, ಕೆಲವು ಶಾಲೆಗಳಲ್ಲಿ SDMC ಸೂಚನೆ ಮೇರೆಗೆ 3 ದಿನ ಮೊಟ್ಟೆ, 3 ದಿನ ಬಾಳೆಹಣ್ಣು ಕೊಡಲಾಗುತ್ತಿದೆ. ಸೋಮವಾರ ಮತ್ತು ಶನಿವಾರ ಮೊಟ್ಟೆ ಕೊಡದೆ ಬಾಳೆಹಣ್ಣು ವಿತರಿಸಲಾಗುತ್ತಿದೆ.
762 ಶಾಲೆಗಳಲ್ಲಿ ಪರಿಶೀಲನೆ ಮಾಡಿದಾಗ ಸುಮಾರು 568 ಶಾಲೆಗಳಲ್ಲಿ ಮೊಟ್ಟೆ ಕಡ್ಡಾಯವಾಗಿ ಕೊಡುತ್ತಿಲ್ಲದ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ 568 ಶಾಲೆಗಳಿಗೆ ಭೇಟಿ ನೀಡಿ SDMC ಅವರಿಗೆ ತಿಳುವಳಿಕೆ ಹೇಳಬೇಕು ಎಂದು DDPIಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿನ ಕಂಡಿಕೆ-106ರಲ್ಲಿ ಕೆಳಕಂಡಂತೆ ಘೋಷಿಸಲಾಗಿದೆ. *ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರಸ್ತುತ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ/ಬಾಳೆಹಣ್ಣನ್ನು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ವಾರದಲ್ಲಿ ಆರು ದಿನಕ್ಕೆ ವಿಸ್ತರಿಸಲಾಗಿದೆ.
ಸರ್ಕಾರದ ಆದೇಶದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಈಗಾಗಲೇ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರದ ಕೊರತಾಗಿ) ವಾರದಲ್ಲಿ ನಾಲ್ಕು ದಿನ ಪೂರಾ ಪೌಷ್ಠಿಕ ಆಹಾರವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಬ್ಯಾಂಕ್ ಖಾತೆಗಳನ್ನು ತೆರೆಯಲು ಆದೇಶಿಸಲಾಗಿರುತ್ತದೆ.