ಬೆಂಗಳೂರು : ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳು ತಮ್ಮದೇ ಆದ ಪ್ರತ್ಯೇಕ ಲಾಂಛನವನ್ನು ಅಳವಡಿಸಿಕೊಂಡು ಉಪಯೋಗಿಸಲು ಅವಕಾಶ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 6ರಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತಿಯು ನಿಗಮಿತ ನಿಕಾಯವಾಗಿದ್ದು, ಶಾಶ್ವತ ಉತ್ತರಾಧಿಕಾರವನ್ನು ಹೊಂದಿರುವುದರಿಂದ ಸಾಮಾನ್ಯ ಮೊಹರನ್ನು ಹೊಂದಲು ಅವಕಾಶ ನೀಡಿದೆ ಎಂದು ತಿಳಿಸಿರುವ ಸಚಿವರು ಈ ಸಂಬಂಧ ಇಲಾಖೆಯು ಈಗಾಗಲೆ ಆದೇಶ ಹೊರಡಿಸಿದೆ ಎಂದಿದ್ದಾರೆ.
ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳು ತಮ್ಮ ಅಧಿಕೃತ ವಿಸಿಟಿಂಗ್ ಕಾರ್ಡ್ ಮೇಲೆ ತಮ್ಮ ಅಧಿಕಾರದ ಅವಧಿಯಲ್ಲಿ ಮಾತ್ರ ಈ ಲಾಂಛನವನ್ನು ಬಳಸಬಹುದಾಗಿದ್ದು, ಮಾಜಿ ಜನ ಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು, ನೌಕರರಿಗೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಬಳಕೆಯ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.
ಈ ಹಿಂದೆ ತಮ್ಮಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದೊಂದಿಗೆ ನಡೆದ ಸಭೆಯಲ್ಲಿ ಲಾಂಛನವನ್ನು ಬಳಸಲು ಅವಕಾಶ ಮಾಡಿಕೊಡುವುದಾಗಿ ತಾವು ನೀಡಿದ್ದ ಭರವಸೆಗೆ ಅನುಗುಣವಾಗಿ ಈ ಆದೇಶ ಹೊರಡಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನಿಡಿದ್ದಾರೆ.