ಕಲಬುರ್ಗಿ : ಆರ್‌ಎಸ್‌ಎಸ್ ದೇಶದ್ರೋಹಿ ಸಂಘಟನೆಯಾಗಿದ್ದು, ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಅದರ ಮೇಲಿನ ನಿಷೇಧ ತೆಗೆದಿದ್ದೇ ದೊಡ್ಡ ತಪ್ಪಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಆರ್‌ಎಸ್‌ಎಸ್‌ಗೆ ನಿಷೇಧ ಹೇರುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಗೆ ನೂರು ವರ್ಷದ ಇತಿಹಾಸವಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿಕೆಗೆ ಪ್ರಿಯಾಂಕ್ ತಿರುಗೇಟು ಕೊಟ್ಟಿದ್ದು, 10 ವರ್ಷದಲ್ಲಿ ಕೇವಲ 10 ಒಳ್ಳೆಯ ಕಾರ್ಯಕ್ರಮ ಇದ್ದರೆ ಹೇಳಿ. ದೇಶದ ಅಭಿವೃದ್ಧಿ ಮಹಿಳಾ ಸಬಲೀಕರಣಕ್ಕೆ ಆರ್ ಎಸ್ ಎಸ್ ಕೊಡುಗೆ ಏನಿದೆ? ನಾರಾಯಣಸ್ವಾಮಿ ಅವರಿಗೆ ತಮ್ಮ ಇತಿಹಾಸವೇ ಗೊತ್ತಿಲ್ಲ. ಇನ್ನು ಆರೆಸ್ಸೆಸ್ ಇತಿಹಾಸ ಏನು ಗೊತ್ತಿರುತ್ತದೆ ಎಂದು ಲೇವಡಿ ಮಾಡಿದರು.
ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಇನ್ನು ಮುಂದೆ ನಾನು ಪ್ರತಿಕ್ರಿಯೆ ನೀಡಲ್ಲ. ಸಾವರ್ಕರ್ ಬಗ್ಗೆ ದಾಖಲೆ ಕೊಟ್ಟರೆ ರಾಜೀನಾಮೆ ಕೊಡುತ್ತೇನೆ ಅಂದಿದ್ದರು. ಮೊದಲು ಕೊಟ್ಟ ಮಾತಿನಂತೆ ಚಲವಾದಿ ರಾಜೀನಾಮೆ ಕೊಡಲಿ. ಛಲವಾದಿ ಬಿಜೆಪಿಯಲ್ಲಿ ಇರುವುದೇ ನಾಲ್ಕು ಐದು ಜನರನ್ನು ಬೈಯೋಕೆ. ಬಿಜೆಪಿಯ ಯಾವ ಯಾವ ನಾಯಕರು ಮಕ್ಕಳು ಆರ್ ಎಸ್ ಎಸ್ ಶಾಖೆಯಲ್ಲಿ ಇದ್ದಾರೆ?
ಛಲವಾದಿ ನಾರಾಯಣಸ್ವಾಮಿ ಮಕ್ಕಳು ಆರ್ ಎಸ್ ಎಸ್ ಶಾಖೆಯಲ್ಲಿ ಇದ್ದಾರಾ? ಯಾರ್ಯಾರು ಆರ್ ಎಸ್ ಎಸ್ ಚಡ್ಡಿ ಹಾಕೊಂಡು ತಿರುಗಾಡುತ್ತಿದ್ದಾರೆ? ಪಾಪ ನಮ್ಮ ಅಣ್ಣನಿಗೆ ನೀಡಿದ ಭೂಮಿಯನ್ನು ವಾಪಸ್ ನೀಡಿದರು.ಚಾಣಕ್ಯ ವಿಶ್ವವಿದ್ಯಾಲಯ ಭೂಮಿಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದರು.