ಬೆಂಗಳೂರು : ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಸರಣಿ ಹೃದಯಘಾತಕ್ಕೆ ಇದುವರೆಗೂ 35ಕ್ಕೂ ಹೆಚ್ಚು ಜನರು ಹಾಸನ ಜಿಲ್ಲೆ ಒಂದರಲ್ಲಿ ಸಾವನಪ್ಪಿದ್ದಾರೆ. ಹಾಸನ ಜಿಲ್ಲೆ ಹೊರತುಪಡಿಸಿ ಉಳಿದ ಕೆಲ ಜಿಲ್ಲೆಗಳಲ್ಲೂ ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣ ಎಚ್ಚೆತ್ತ ಸರ್ಕಾರ ನಿಖರ ಕಾರಣ ತಿಳಿದುಕೊಳ್ಳಲು ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಿತು ಇದೀಗ ತಜ್ಞರ ಒಂದು ವರದಿಯಲ್ಲಿ ಆತಂಕಕಾರಿ ಅಂಶಗಳು ಬಯಲಾಗಿವೆ.
ರಾಜ್ಯ ಹಾಗೂ ಹಾಸನದಲ್ಲಿ ಸಂಭವಿಸಿದ ಸರಣಿ ಹೃದಯಾಘಾತ ಪ್ರಕರಣಗಳ ಅಧ್ಯಯನಕ್ಕೆ ಸರ್ಕಾರ ಎರಡು ಪ್ರತ್ಯೇಕ ತಾಂತ್ರಿಕ ಸಮಿತಿ ರಚಿಸಿದೆ.ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಘಾತಕ್ಕೆ ಕಾರಣವೇನು ಎಂಬವುದು ತಜ್ಞರು ಅಧ್ಯಯನ ನಡೆಸಿ ಸಿದ್ದಪಡಿಸಿರುವ ವರದಿಯಲ್ಲಿ ಅಡಕವಾಗಿದೆ. ನಿನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದಿದ್ದು, ಹಲವು ವಿಚಾರಗಳು ಚರ್ಚೆಯಾಗಿವೆ. ಅಲ್ಲದೆ ಕೆಲವು ಆತಂಕಕಾರಿ ಅಂಶಗಳು ಕೂಡ ಬಯಲಾಗಿವೆ.
ತಜ್ಞರ ವರದಿಯಲ್ಲಿ ಏನಿದೆ?
ತಾಂತ್ರಿಕ ಸಲಹಾ ಸಮಿತಿ ಅಧ್ಯಯನ ನಡೆಸಿ ಸಿದ್ದಪಡಿಸಿರುವ ವರದಿಯಲ್ಲಿ ಹಲವು ಮಹತ್ವದ ವಿಚಾರಗಳು ಅಡಕವಾಗಿವೆ. ವರದಿಯಲ್ಲಿ ಏನಿದೆ ಎಂಬುವುದು ಟಿವಿ9ಗೆ ಮೂಲಗಳಿಂದ ಮಾಹಿತಿ ದೊರೆತಿದೆ. ಕರೋನಾ ರೋಗದಿಂದ ಗುಣಮುಖರಾದವರಿಗೆ ಕೊಂಚ ಹೃದಯ ಸಮಸ್ಯೆ ಕಾಡುತ್ತಿದೆ. ಹೃದಯಘಾತಕ್ಕೆ ಕರೋನಾ ಲಸಿಕೆ ಕಾರಣವಲ್ಲ. ಆದರೆ, ಕರೋನಾ ವೈರಸ್ ಕೊಂಚ ಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ ಎಂದು ವರದಿಯಲ್ಲಿದೆ.
ವರದಿಯಲ್ಲಿ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆಯೂ ಉಲ್ಲೇಖ ಮಾಡಲು ತಜ್ಞರು ಮುಂದಾಗಿದ್ದಾರೆ. ಕರೋನಾ ಬಂದು ಹೋದ ಮೂರು ವರ್ಷದ ಬಳಿಕ ಹೃದಯ ಸಮಸ್ಯೆ ಕಂಡು ಬರುತ್ತಿದೆ. ಅಲ್ಲದೆ, ಕರೋನಾ ರೋಗದಿಂದ ಗುಣಮುಖರಾದವರಿಗೆ ನಿದ್ರಾಹೀನತೆ, ಸುಸ್ತು, ಉಸಿರಾಟದ ಸಮಸ್ಯೆ ಅತಿಯಾದ ಬೊಜ್ಜು ಕಂಡು ಬರುತ್ತಿದ್ದು, ತಜ್ಞರು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಲು ಮುಂದಾಗಿದ್ದಾರೆ.
ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಇಂದು ಹೃದಯಘಾತದ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹೃದಯಾಘಾತದ ಬಗ್ಗೆ ಸಿದ್ದವಾಗಿರುವ ವರದಿಯ ಬಗ್ಗೆ ತಾಂತ್ರಿಕ ಸಮಿತಿ ಸದಸ್ಯರು ಚರ್ಚಿಸಿದರು. ಅಂತಿಮ ವರದಿಯಲ್ಲಿನ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಯಿತು.
ತಜ್ಞರು ವರದಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.ಏಕಾಏಕಿ ಹೃದಯಾಘಾತಕ್ಕೆ ಕಾರಣಗಳೇನು ಎಂಬುವುದನ್ನು ತಜ್ಞರು ಪತ್ತೆ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಲು ಮುಂದಾಗಿದ್ದಾರೆ. ಎರಡು ದಿನಗಳಲ್ಲಿ ತಜ್ಞರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.