ಬೆಂಗಳೂರು : ಆತನಿಗೆ ಅನ್ಯ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇತ್ತು. ಅಲ್ಲದೇ ನಿತ್ಯ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ಇದರಿಂದ ಮನನೊಂದ ಆಕೆ ಪತಿಯನ್ನು ಹತ್ಯೆಗೈದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಎಸ್.ಜಿ. ಪಾಳ್ಯದ ನಿವಾಸಿ ಭಾಸ್ಕರ್ (42) ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ಶ್ರುತಿ (32) ಬಂಧಿತೆ ಎಂದು ತಿಳಿದುಬಂದಿದೆ.
ವರ್ಷದ ಹಿಂದೆ ಶ್ರುತಿಯನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೂ. 27ರಂದು ರಾತ್ರಿ ಬಾಸ್ಕರ್ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ದಂಪತಿ ನಡುವೆ ಜಗಳವಾಗಿತ್ತು. ಕೋಪದಲ್ಲಿ ಶ್ರುತಿ ಮುದ್ದೆಕೋಲಿ ನಿಂದ ತಲೆಗೆ ಹೊಡೆದಿದ್ದು, ನಂತರ ಮಲಗಿದ್ದ ಭಾಸ್ಕರ್ ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದ.
ಸುದ್ದಿ ತಿಳಿದು ಎಸ್.ಜಿ. ಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ರಾತ್ರಿ ಮನೆಗೆ ಬಂದು ಮಲಗಿದ ಪತಿ ಸಾವನ್ನಪ್ಪಿದ್ದಾರೆಂದು ಪೊಲೀಸರ ಮುಂದೆ ಶ್ರುತಿ ಹೇಳಿಕೆ ನೀಡಿದ್ದಳು. ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ವಾರಸುದಾರರಿಗೆ ಹಸ್ತಾಂತರಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಸ್ಕರ್ ಮೇಲೆ ಹಲ್ಲೆ ಮಾಡಿ ರುವುದು ತಿಳಿದುಬಂದಿತ್ತು.
ಚಿಕ್ಕಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಭಾಸ್ಕರ್ ಅವರ ಅಣ್ಣನ ಮಗ ಪ್ರಶಾಂತ್ ದೂರು ನೀಡಿದ್ದರು. ಈ ಮಧ್ಯೆ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ಮಾಡಿರುವುದು ದೃಢಪಟ್ಟ ಹಿನ್ನೆಲೆ ಜು. 3ರಂದು ಪೊಲೀಸರು ತನಿಖೆ ಮುಂದುವರಿಸಿ, ಶ್ರುತಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.