ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಪ್ರತಿ ದಿನ ಸುಮಾರು 45 ಸಾವಿರ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹೊಸದುರ್ಗ ಮೊದಲ ಸ್ಥಾನ ಪಡೆದರೆ, ಹಿರಿಯೂರು ಎರಡನೇ ಸ್ಥಾನ ಪಡೆದಿದೆ ಎಂದು ಶಿಮುಲ್ ನಿರ್ದೇಶಕ ಬಿಸಿ. ಸಂಜೀವಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಖಾಸಗಿ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಚಳ್ಳಕೆರೆ ವಿಭಾಗದ ಹಿರಿಯೂರು ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಕಾರ್ಯಕ್ರಮ ಕುರಿತು ಮಾತನಾಡಿದರು.
ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ಹಾಲು ಉತ್ಪಾದಕರ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಹಾಗೂ ರೈತರ ಹೈನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಳ್ಳಕೆರೆಯಲ್ಲಿ ಶಿಮುಲ್ ವಿಭಾಗಿಯ ಕಛೇರಿಯನ್ನು ಪ್ರಾರಂಭಿಸಲಾಗಿದೆ. ನಾವು ಅಧಿಕಾರಕ್ಕೆ ಬಂದು ಹತ್ತು ತಿಂಗಳು ಕಳೆದಿದ್ದು, ಒಂದಿಷ್ಟು ಬದಲಾವಣೆ ತರಲಾಗಿದೆ. ಹಿರಿಯೂರು ವಿಭಾಗಕ್ಕೆ ಸಭೆ ನಡೆಸಲು ಆಡಳಿತ ಕಛೇರಿ ಅವಶ್ಯಕತೆ ಇದ್ದು ಮುಂದಿನ ವರ್ಷ 40 ಲಕ್ಷ ವೆಚ್ಚದಲ್ಲಿ ಆಡಳಿತ ಕಛೇರಿ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿ ನಾಲ್ಕು ಸಂಘಗಳು ಹೊಸದಾಗಿ ಉದ್ಘಾಟನೆ ಮಾಡಲಾಗಿದ್ದು, ಇದರಿಂದ ಹಾಲಿನ ಉತ್ಪಾದನೆ, ಹಾಲು ಉತ್ಪಾದಕರ ಸಂಖ್ಯೆ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಹೊಸದಾಗಿ 4 ನಂದಿನಿ ಪಾರ್ಲರ್ ಕೇಂದ್ರ ಮತ್ತು 5 ಡೀಲರ್ ಶಿಪ್ ನೀಡಲಾಗಿದ್ದರಿಂದ ಮಾರಾಟ ಹೆಚ್ಚಳವಾಗಿದೆ. 2024ರ ಆಗಸ್ಟ್ ನಿಂದ ಇಲ್ಲಿನವರಿಗೆ ಹಿರಿಯೂರಿನಲ್ಲಿ ಐದು ಸಂಘಗಳಿಗೆ ಸುಮಾರು 15ಲಕ್ಷ ಹಣವನ್ನು Revolving ಪಂಡ್ ನೀಡಲಾಗಿದೆ. ಕಲ್ಯಾಣ ಟ್ರಸ್ಟ್ ವತಿಯಿಂದ ವಿಮೆ ಇಲ್ಲದ ಸುಮಾರು 10 ರಾಸುಗಳಿಗೆ ಎರಡು ಲಕ್ಷ ಪರಿಹಾರ ನೀಡಲಾಗಿದೆ. ಸಂಘದ ಸದಸ್ಯ/ಕಾರ್ಯದರ್ಶಿ/ಆಡಳಿತದವರು 15 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ 3 ತಿಂಗಳೊಳಗೆ 2.60ಲಕ್ಷ ನಿವೃತ್ತಿ ಹಣ ನೀಡಲಾಗಿದ್ದು, ಇದೀಗ ಹೊಸದಾಗಿ ನಿವೃತ್ತಿ ಹೊಂದಿದವರಿಗೆ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬಡ್ಡಿ ರಹಿತ ಅನುದಾನವನ್ನು ನೀಡಲಾಗುತ್ತಿದೆ. ತಾಲೂಕಿನಲ್ಲಿ ಒಂದು ಬರಡು ರಾಸು ಶಿಬಿರ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ 3 ಬರಡು ರಾಸು ಶಿಬಿರ ಕಾರ್ಯಕ್ರಮ ನಡೆಸಲು ಗುರಿ ಹೊಂದಲಾಗಿದೆ. ಸ್ಥಳೀಯವಾಗಿ ಯಾರು ನಿರ್ದೇಶಕರು ಇಲ್ಲ ಎಂಬ ಕೊರಗು ಕೈಬಿಡಿ, ನಾವೆಲ್ಲರೂ ನಿಮ್ಮ ನಿರ್ದೇಶಕರೇ, ಮುಕ್ತವಾಗಿ ತಿಳಿಸಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಚಳ್ಳಕೆರೆಯ ಸಾಯಿ ಬಾಬಾ ದೇವಾಲಯದಲ್ಲಿ ಇದೇ ತಿಂಗಳ 9 ಹಾಗೂ 10 ರಂದು ಗುರು ಪೌರ್ಣಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದ್ದು, ಎಲ್ಲರೂ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಸಾಯಿ ಬಾಬಾರ ದರ್ಶನ ಪಡೆಯಿರಿ ಎಂದು ಹೇಳಿದರು.
ಇನ್ನೂ ಚಿತ್ರದುರ್ಗ ನಿರ್ದೇಶಕ ಜಿಪಿ ರೇವಣಸಿದ್ದಪ್ಪ ಮಾತನಾಡಿ ಹಿರಿಯೂರಿನಿಂದ ಶಿಮುಲ್ ಗೆ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿರುವುದು ಸಂತಸ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡ ಬಳಿಕ, ನೀರಾವರಿ ಸೌಲಭ್ಯದಿಂದ ಹೆಚ್ಚಿನ ಹಾಲು ಉತ್ಪಾದನೆಯಾಗುವ ನಿರೀಕ್ಷೆಯಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು 300 ಕೋಟಿ ರೂಪಾಯಿ ವೆಚ್ಚದಲ್ಲಿ ಡೈರಿ ನಿರ್ಮಾಣಕ್ಕೆ ಸಿದ್ಧವಾಗಿದ್ದು, ಶ್ರಾವಣ ಮಾಸದಲ್ಲಿ ಗುದ್ದಲಿ ಪೂಜೆ ನೇರವೇರಿಸಿ, ಮುಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಎರಡು ಜಿಲ್ಲೆಯ ಹೈನುಗಾರಿಕೆಗೆ ಅನುಕೂಲವಾಗಲಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹೊಳಲ್ಕೆರೆ ಶಿಮುಲ್ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ ದೇಶದಲ್ಲಿ ನಂದಿನಿ ಉತ್ಪನ್ನಗಳು ನಾಲ್ಕನೇ ಸ್ಥಾನ ಪಡೆದಿದೆ ಹೆಮ್ಮೆಯ ವಿಚಾರ. ತಾಲೂಕಿನಲ್ಲಿ ಚಾಪ್ ಕಟ್ಟರ್ ಸಮಸ್ಯೆ ಇದ್ದು, ಮುಂದಿನ ದಿನಗಳಲ್ಲಿ ಚಾಪ್ ಕಟ್ಟರ್ ಕೊಡಿಸುವ ಪ್ರಯತ್ನ ಮಾಡಲಾಗುವುದು. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಸ್ಯೆಗಳನ್ನು ಮುಂದಿನ ಶಿಮುಲ್ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲಾಗುವುದು. ಮಹಿಳೆಯರ ಹೆಚ್ಚು ಶ್ರಮದಿಂದ ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಹಾಯಕ ವ್ಯವಸ್ಥಾಪಕ ಎಂ. ಪುಟ್ಟರಾಜು, ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಪಶುವೈದ್ಯ ಡಾ. ದೀರಾಜ್ ಪ್ರಕಾಶ್ ಜಿ, ನಿವೃತ್ತ ವಿಸ್ತರಣಾಧಿಕಾರಿ ಕೃಷ್ಣಪ್ಪ ಸೇರಿದಂತೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.