ಬೆಂಗಳೂರು: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾಗಿರುವಂತ ಅವ್ಯವಹಾರದ ಬಗ್ಗೆ ವಿಚಾರಣಾಧಿಕಾರಿಯನ್ನು ನೇಮಿಸಿ ತನಿಖೆಗೆ ಸಹಕಾರ ಇಲಾಖೆ ಆದೇಶಿಸಿದೆ.
ಈ ಕುರಿತಂತೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಈ ಸಂಸ್ಥೆಯು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರಡಿ ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ವಿರುದ್ದ ಈ ಕಛೇರಿಗೆ ವಿವಿಧ ದಿನಾಂಕಗಳಂದು ದೂರು ಅರ್ಜಿಗಳು ಸಲ್ಲಿಕೆಯಾಗಿರುತ್ತವೆ. ಸದರಿ ದೂರು ಅರ್ಜಿಗಳ ಕುರಿತು ಸತ್ಯಾಸತ್ಯತೆಯನ್ನು ಅರಿಯಲು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ರ ಪ್ರಕರಣ 25ರಡಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು ಸ್ವಪ್ರೇರಣೆಯಿಂದ ವಿಚಾರಣೆ ನಡೆಸಲು ನಿರ್ಧರಿಸಿ ಕೆಳಕಂಡ ಆದೇಶ ಹೊರಡಿಸಿರುವುದಾಗಿ ತಿಳಿದ್ದಾರೆ.
ಪ್ರಸ್ತಾವನೆಯಲ್ಲಿ ತಿಳಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 25 ರಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಆದ ನಾನು ಕನ್ನಡ ಸಾಹಿತ್ಯ ಪರಿಷತ್ ಇದರ ಕಾರ್ಯಚಟುವಟಿಕೆಗಳ ಬಗ್ಗೆ ಮುಂದೆ ನಮೂದಿಸಿರುವ ಅಂಶಗಳ ಕುರಿತು ವಿಚಾರಣೆ ನಡೆಸಲು ಶ್ರೀ ಪಿ.ಶಶಿಧರ್, ಸಹಕಾರ ಸಂಘಗಳ ಉಪ ನಿಬಂಧಕರು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದ್ದಾರೆ.
ವಿಚಾರಣಾಂಶ:-
1. ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 9 ಮತ್ತು 10 ರನ್ವಯ 2022-23 ರಿಂದ ಇದುವರೆವಿಗೂ ಅನುಮೋದಿಸಿರುವ ತಿದ್ದುಪಡಿಯ ಬಗ್ಗೆ ಪರಿಶೀಲಿಸುವುದು.
2. ಸಂಘದ ನಿಯಮ-ನಿಬಂಧನೆಯ ಪ್ರಕಾರ ಆಯ್ಕೆಗೊಂಡಿರುವ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ನಿಯಮ ಬಾಹಿರವಾಗಿ ಹಾಲಿ ಅಧ್ಯಕ್ಷರು ನೋಟೀಸ್ ಜಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸುವುದು.
3. 2022-23ನೇ ಸಾಲಿನಿಂದ ಇದುವರೆವಿಗೂ ಸಂಘಕ್ಕೆ ಸರ್ಕಾರ ಮತ್ತು ಇತರೆ ಮೂಲಗಳಿಂದ ಸಂಗ್ರಹವಾಗಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು.
4. 2022-23ನೇ ಸಾಲಿನಿಂದ ಇದುವರೆವಿಗೂ ವಿವಿಧ ಕಾರ್ಯಕ್ರಮಗಳಿಗಾಗಿ ಸಂಘವು ಜಿಲ್ಲಾ ಸಂಘಗಳಿಗೆ, ತಾಲ್ಲೂಕು ಸಂಘಗಳಿಗೆ ಮತ್ತು ಇತರೆ ಸಂಘ ಸಂಸ್ಥೆಗಳಿಗೆ ನೀಡಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣದುರುಪಯೋಗ ಮಾಡಿರವ ಬಗ್ಗೆ ಪರಿಶೀಲಿಸುವುದು.
5. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದವರು ವಾಹನಗಳನ್ನು ಖರೀದಿಸಿರುವ ಮತ್ತು ಮಾರಾಟ ಮಾಡಿವಲ್ಲಿ ಮಾಡಿರುವ ಹಣದುರುಪಯೋಗದ ಬಗ್ಗೆ ಪರಿಶೀಲಿಸುವುದು.
6. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದ ಕಟ್ಟಡ ನಿರ್ಮಾಣ ಮತ್ತು ನವೀಕರಣದಲ್ಲಿನ ಹಣ ದುರುಪಯೋಗ ಮಾಡಿರವ ಬಗ್ಗೆ ಪರಿಶೀಲಿಸುವುದು.
7. ಸಂಘದ ಕಂಪ್ಯೂಟರ್ ಖರೀದಿ, ಸಿಸಿ ಕ್ಯಾಮೆರಾ ಅಳವಡಿಕೆ, ಅಗ್ನಿಶಾಮಕ ಉಪಕರಣದ ಅಳವಡಿಕೆ, ಪುಸ್ತಕಗಳ ಮುದ್ರಣಗಳಿಗೆ ಸಂಬಂಧಿಸಿದ ಹಣದುರುಪಯೋಗದ ಬಗ್ಗೆ ಪರಿಶೀಲಿಸುವುದು.
8. ಸಂಘದ ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಸಲ್ಲಿಸದೆ ಹಣದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು.
9. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ರವರು ಆಡಿಟ್ ವರದಿಯಲ್ಲಿ ಆಕ್ಷೇಪಿಸಿರುವ ಅಂಶಗಳಿಗೆ ಅನುಪಾಲನಾ ವರದಿ ಸಲ್ಲಿಸದೆ ಇರುವ ಬಗ್ಗೆ ಪರಿಶೀಲಿಸುವುದು.
10. ಸಂಘದ ಆಡಳಿತ ಮಂಡಳಿ ನಿರ್ಣಯಗಳನ್ನು ಸಂಘದ ನಿಯಮ ನಿಬಂಧನೆಗೆ ವಿರುದ್ಧವಾಗಿ ತಮ್ಮ ಇಚ್ಛಾನುಸಾರ ದಾಖಲಿಸಿರುವ ಬಗ್ಗೆ ಪರಿಶೀಲಿಸುವುದು.
11. ಸಂಘದ ಹಣವನ್ನು ಅಧ್ಯಕ್ಷರ ಕುಟುಂಬ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮಬಾಹಿರವಾಗಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸುವುದು.
12. ಸಂಘದ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್ನ್ನು ನೀಡುವಲ್ಲಿ ಆಗಿರುವ ಹಣದುರುಪಯೋಗದ ಬಗ್ಗೆ ಪರಿಶೀಲಿಸುವುದು.
13. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದಲ್ಲಿನ ಸಿಬ್ಬಂದಿ ನೇಮಕಾತಿ ನಿಯಮಬದ್ದವಾಗಿ ನಡೆದಿರುವ ಬಗ್ಗೆ ಪರಿಶೀಲಿಸುವುದು.
14. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದವರು ನಿಯಮ ಬಾಹಿರವಾಗಿ ವಿದೇಶ ಪ್ರವಾಸ ಕೈಗೊಂಡು ಹಣದುರುಪಯೋಗ ಮತ್ತು ನಷ್ಟಮಾಡಿರುವ ಬಗ್ಗೆ ಪರಿಶೀಲಿಸುವುದು.
15. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದಲ್ಲಿ ಸಂಗ್ರವವಾಗಿರುವ ಸಿ.ಎಸ್.ಆರ್ ಫಂಡ್ ಹಣ ದುರುಪಯೋಗದ ಬಗ್ಗೆ ಪರಿಶೀಲಿಸುವುದು.
16. ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 11ರಡಿ ಪ್ರತಿ ವರ್ಷ ನಡೆಸಿರುವ ವಾರ್ಷಿಕ ಸರ್ವಸದಸ್ಯರ ಬಗ್ಗೆ ಪರಿಶೀಲಿಸುವುದು.
17. ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 13ರಡಿ ಪ್ರತಿ ವರ್ಷ ವಾರ್ಷಿಕ ಸರ್ವಸದಸ್ಯರ ಸಭೆಯ ನಂತರ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿ ಸ್ವೀಕೃತಿ ಪಡೆದಿರುವ ಬಗ್ಗೆ ಪರಿಶೀಲಿಸುವುದು.
ಮೇಲೆ ತಿಳಿಸಿರುವ ವಿಚಾರಣಾ ಅಂಶಗಳ ಬಗ್ಗೆ ವಿಚಾರಣಾಧಿಕಾರಿಗಳು ಈ ಆದೇಶ ಹೊರಡಿಸಿದ 45 ದಿನಗಳೊಳಗಾಗಿ ವಿಚಾರಣೆಯನ್ನು ನಡೆಸಿ ವಿಚಾರಣಾ ವರದಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಲು ಸೂಚಿಸಿದೆ. ಈ ಆದೇಶವನ್ನು ನನ್ನ ಸಹಿ ಮತ್ತು ಕಛೇರಿಯ ಮುದ್ರೆಯೊಂದಿಗೆ ದಿನಾಂಕ: 30-06-2025 ರಂದು
ಹೊರಡಿಸಿದೆ ಎಂದಿದ್ದಾರೆ.