ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಉಪ ವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಪರಪ್ಪ.ಕೆ ಜನಾನುರಾಗಿಯಾಗಿದ್ದವರು. ಎಷ್ಟೇ ಹೊತ್ತಿನಲ್ಲಿ ರೋಗಿಗಳು ಕರೆ ಮಾಡಿ ಸೇವೆಗೆ ಕೋರಿದ್ರೆ ಸಾಕು, ಕ್ಷಣಾರ್ಧ ಚಿಕಿತ್ಸೆಗೆ ಹಾಜರ್. ಇಂತಹ ಸಹೃದಯಿ ವೈದ್ಯ ಡಾ.ಪರಪ್ಪ ಇಂದು ನಿವೃತ್ತರಾಗಿದ್ದಾರೆ. ಅವರಿಗೆ ಇಡೀ ತಾಲ್ಲೂಕಿನ ಜನತೆ, ಆರೋಗ್ಯ ಇಲಾಖೆಯ ನೌಕರರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಇಂದು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟ, ಆರೋಗ್ಯ ರಕ್ಷಾ ಸಮಿತಿ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದಂತ ಅವರು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಸವಾಲಿನ ಕೆಲಸ. ಆಸ್ಪತ್ರೆಯೊಳಗಿನ ವೈದ್ಯಸಿಬ್ಬಂದಿಗಳ ಜೊತೆ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಉತ್ತಮ ಕೆಲಸ ಮಾಡಲು ಅತ್ಯಗತ್ಯ ಎಂದರು.
ಹಣದ ಹಿಂದೆ ಹೋದರೆ ನೆಮ್ಮದಿ ಸಿಗುವುದಿಲ್ಲ. ನಾವು ಸರ್ಕಾರಿ ಸೇವಕರಾಗಿ ಸೇರಿದ ನಂತರ ಒಂದಷ್ಟು ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ಅದರಲ್ಲೂ ಸರ್ಕಾರಿ ಆಸ್ಪತ್ರೆಯ ವೈದ್ಯರಾದವರ ಮೇಲೆ ಅತಿಹೆಚ್ಚು ಹೊಣೆ ಇರುತ್ತದೆ. ರೋಗಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ ನಾವು ಒಳ್ಳೆಯ ಹೆಸರು ಪಡೆಯಬಹುದು. ನನ್ನ ಅವಧಿಯಲ್ಲಿ ಸಿವಿಲ್ ಸರ್ಜನ್ ಆಗಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ ಎಂದು ತಿಳಿಸಿದರು.
ಡಾ. ವಿಕ್ರಮ್ ಮಾತನಾಡಿ, ನಾನು ಉಪವಿಭಾಗೀಯ ಆಸ್ಪತ್ರೆಗೆ ಬಂದಾಗ ಉತ್ತಮ ಕರ್ತವ್ಯ ನಿರ್ವಹಣೆ ಕುರಿತು ನನಗೆ ಸಮರ್ಥ ಮಾರ್ಗದರ್ಶನ ನೀಡಿದವರು ಡಾ. ಪರಪ್ಪನವರು. ಅವರ ಸೇವೆ ಅನುಕರಣೀಯವಾದದ್ದು. ವೈದ್ಯರಾಗಿ ಆಸ್ಪತ್ರೆ ಆಡಳಿತಾಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ವಯೋನಿವೃತ್ತಿ ಹೊಂದಿದರೂ ಆಸ್ಪತ್ರೆ ಜೊತೆಗಿನ ಬಾಂಧವ್ಯ ಕಳೆದುಕೊಳ್ಳಬಾರದು ಎಂದರು.
ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಸಾರ್ವಜನಿಕ ವಲಯದಲ್ಲಿ ಡಾ. ಪರಪ್ಪ ಬಗ್ಗೆ ಉತ್ತಮ ಹೆಸರು ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಉತ್ತಮ ಹೆಸರು ಪಡೆಯುವುದು ಸವಾಲಿನ ಕೆಲಸ. ಉತ್ತಮ ಸೇವೆ ಮಾಡಿದರೆ ಜನರು ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ಪರಪ್ಪ ಅವರು ಉತ್ತಮ ಉದಾಹರಣೆಯಾಗಿದೆ ಅವರು ನಿವೃತ್ತರಾಗಿದ್ದು ಸಾಗರ ಆಸ್ಪತ್ರೆಗೆ ದೊಡ್ಡನಷ್ಟವಾಗಿದೆ. ಕೊರೋನಾ ಸಂದರ್ಭದಿಂದ ಹಿಡಿದು ಈತನಕ ಡಾ. ಪರಪ್ಪ ಸೇರಿ ನಮ್ಮ ಸರ್ಕಾರಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ ಎಂದು ಡಾ.ಪರಪ್ಪ ಅವರನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್, ವೈದ್ಯೆ ಡಾ. ಪ್ರತಿಮಾ, ಡಾ. ನಾಗೇಂದ್ರಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಿವೈ ರಾಘವೇಂದ್ರ, ವಿಜಯೇಂದ್ರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ಹಿಗ್ಗಾಮುಗ್ಗಾ ವಾಗ್ಧಾಳಿ