ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಕೇಂದ್ರ ಸರ್ಕಾರದಿಂದ ಹಣ ಕೊಟ್ಟಿದ್ದಾರೆ. ನಮ್ಮ ರಾಜ್ಯದ ತೆರಿಗೆ ಹಣ ಕೊಟ್ಟಿದ್ದಾರೆಯೆ ವಿನಃ ಬಿ.ವೈ.ರಾಘವೇಂದ್ರ, ವಿಜಯೇಂದ್ರ ಮನೆಯಿಂದ ಹಣ ಕೊಟ್ಟು ಸೇತುವೆ ಮಾಡಿಲ್ಲ. ಆದರೆ ವಾರಕ್ಕೊಮ್ಮೆ ಬಂದು ನಾನೇ ಸೇತುವೆ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿರುವ ಸಂಸದ ರಾಘವೇಂದ್ರ ವರ್ತನೆ ಹಾಸ್ಯಾಸ್ಪದ ಎಂಬುದಾಗಿ ಸಂಸದ ಬಿವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ ನಡೆಸಿದ್ದಾರೆ.
ಇಂದು ಶಿವಮೊಗ್ಗದ ಸಾಗರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ತುಮರಿ ಸೇತುವೆ ಪಕ್ಕ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಟೆಂಟ್ ಹಾಕಿಕೊಂಡು ಕುಳಿತುಕೊಂಡು, ಸೇತುವೆ ಮಾಡಿದ್ದು ನಾವು ಎಂದು ಬಂದವರಿಗೆಲ್ಲಾ ಪ್ರಚಾರ ಮಾಡುವುದು ಒಳ್ಳೆಯದು ಎಂಬುದಾಗಿ ವ್ಯಂಗ್ಯವಾಡಿದರು.
ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಮೊದಲು ನಾನು ಮನವಿ ಮಾಡಿದ್ದೇ. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿದ್ದಾಗ ಸಿಗಂದೂರು ಕ್ಷೇತ್ರದಲ್ಲಿ ಸೇತುವೆ ಮಾಡಿಸಿಕೊಡುವುದಾಗಿ ಮಾತು ಕೊಟ್ಟಿದ್ದರು. ನಂತರ ಸಂಸದರಾದ ಮೇಲೆ ನಿತಿನ್ ಗಡ್ಕರಿ ಮೇಲೆ ಒತ್ತಡ ತಂದು ಸೇತುವೆ ಮಂಜೂರು ಮಾಡಿಸಿದ್ದಾರೆ. ಸೇತುವೆ ಆಗಿರುವ ಕ್ರೆಡಿಟ್ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಬೇಕೆ ವಿನಃ ಇದರಲ್ಲಿ ರಾಘವೇಂದ್ರ ಕೊಡುಗೆ ಏನಿಲ್ಲ. ಸೇತುವೆ ಲೋಕಾರ್ಪಣೆಗೆ ಪ್ರಧಾನಿಯನ್ನಾಗಲೀ, ಗಡ್ಕರಿಯನ್ನಾಗಲೀ ಕೊನೆಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರನ್ನೆ ಕರೆಸಲಿ. ನಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತೇನೆ. ನನ್ನ ಗಮನಕ್ಕೆ ತರದೇ ಸೇತುವೆ ಲೋಕಾರ್ಪಣೆಗಾಗಿ ಸ್ಥಳ ಗುರುತಿಸುವುದು ಇನ್ನಿತರೆ ಚಟುವಟಿಕೆ ನಡೆಸಿದರೆ ಸಹಿಸಿವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.
ನಮ್ಮದು 140 ಶಾಸಕರು ಇರುವ ಜಂಬೂಸವಾರಿ. ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಶಾಸಕರ ಸಮಸ್ಯೆ ಆಲಿಸಲು ಸುರ್ಜೇವಾಲ ಬಂದಿದ್ದಾರೆ. ಆದರೆ ಸಿ.ಟಿ.ರವಿ ಸೂಟ್‌ಕೇಸ್ ಒಯ್ಯಲು ಬಂದಿದ್ದಾರೆ ಎಂದು ಹೇಳಿರುವುದನ್ನು ಖಂಡಿಸುತ್ತೇವೆ. ಬಹುಶ್ಯಃ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ವರಿಷ್ಟರು ಸೂಟ್‌ಕೇಸ್ ತೆಗೆದುಕೊಂಡು ಹೋಗಲು ರಾಜ್ಯಕ್ಕೆ ಬರುತ್ತಿದ್ದರೇನೋ. ಅದಕ್ಕೆ ನಮ್ಮ ಪಕ್ಷದ ವರಿಷ್ಟರ ಬಗ್ಗೆ ಹೇಳುತ್ತಿದ್ದಾರೆ. ವರಿಷ್ಟರು ಬಂದು ಹೋದರೆ ಪಕ್ಷ ಗಟ್ಟಿಯಾಗುತ್ತದೆ. ಪಕ್ಷದ ನಾಯಕತ್ವದ ವಿರುದ್ದ ಮಾತನಾಡಬಾರದು ಎಂದು ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಅಡಿಕೆ ಕೊಳೆರೋಗಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಿಸಲು ಪ್ರಯತ್ನ ನಡೆಸಲಾಗುತ್ತದೆ. ಜೊತೆಗೆ ಅಡಿಕೆ ಹಾನಿಕಾರಕ ಎನ್ನುವ ಚರ್ಚೆ ಸುಪ್ರೀಂ ಕೋರ್ಟ್ನಲ್ಲಿದ್ದು ಕೇಂದ್ರ ಸರ್ಕಾರ ಇದರ ವಿರುದ್ದ ಸಮಗ್ರ ವಾದ ಮಂಡಿಸಬೇಕು. ಅಡಿಕೆ ಹಾಳೆ ಬಳಕೆ ಕುರಿತು ಅಮೇರಿಕಾ ಅಪಸ್ವರ ಎತ್ತಿದೆ. ಟ್ರಂಪ್ ಜೊತೆ ಸ್ನೇಹ ಇರುವ ಮೋದಿಯವರು ಇದರ ಬಗ್ಗೆ ಮಾತನಾಡಬೇಕು. ಅಡಿಕೆ ಹಾಳೆ ತಟ್ಟೆ ಬಳಕೆ ನಿಲ್ಲಿಸಿದ್ದರಿಂದ ನೂರಾರು ಗ್ರಾಮೀಣ ಕೈಗಾರಿಕೆಗಳು ಮುಚ್ಚಿದೆ ಎಂದು ಗುಡುಗಿದರು.
ಸಾಗರ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಸಂಸದ ಹಸ್ತಕ್ಷೇಪ ಸಹಿಸುವುದಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು